ಬೆಳಗಾವಿಯಲ್ಲಿ ಪಾರ್ಕಿಂಗ್‌ ಗಲಾಟೆ ಕೊಲೆಯಲ್ಲಿ ಅಂತ್ಯ-ವಾಹನಗಳಿಗೆ ಬೆಂಕಿ, ಉದ್ವಿಗ್ನ ಪರಿಸ್ಥಿತಿ

ಬೆಳಗಾವಿ: ಜಮೀನು ವಿವಾದ ಸಂಬಂಧಿಸಿದ ಜಗಳವೊಂದು ಕಾರು ಪಾರ್ಕಿಂಗ್‌ ವಿಚಾರದಲ್ಲಿನ ಗಲಾಟೆಗೆ ಕಾರಣವಾಗಿ ವ್ಯಕ್ತಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕೊಲೆ ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಶನಿವಾರ ರಾತ್ರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ದೇವಸ್ಥಾನವೊಂದರ ಜಮೀನು ವಿವಾದ ಕೆಲ ವರ್ಷಗಳಿಂದ ಚಾಲ್ತಿಯಲ್ಲಿತ್ತು. ಶನಿವಾರ ರಾತ್ರಿ ಇದೇ ಜಗಳವು ಕಾರು ಪಾರ್ಕಿಂಗ್‌ ಮಾಡುವ ವಿಚಾರದಲ್ಲಿ ಮತ್ತಷ್ಟು ಗಲಾಟೆಗೆ ಕಾರಣವಾಗಿದೆ. ಈ ವೇಳೆ ಇತ್ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಗೌಂಡವಾಡ ಗ್ರಾಮದ ಮುಖಂಡ ಸತೀಶ ಪಾಟೀಲ ಎಂಬವರ ಕೊಲೆಯಲ್ಲಿ ಅಂತ್ಯವಾಗಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಕಾರು, ದ್ವಿಚಕ್ರ ವಾಹನ, ಮೂರು ಹುಲ್ಲಿನ ಬಣವಿಗೆ ಬೆಂಕಿ ಹಚ್ಚಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ತತ್‌ಕ್ಷಣ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದರು. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ, ಪಿ.ವಿ. ಸ್ನೇಹಾ, ಗ್ರಾಮೀಣ ಎಸಿಪಿ ಗುಡಾಜಿ ಹಾಗೂ ಕಾಕತಿ ಇನ್ಸ್ಪೆಕ್ಟರ್ ಗುರುನಾಥ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

 

Leave a Reply

Your email address will not be published.