🙏 ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

ಈ ಫೋಟೋ ನನಗೆ ಪ್ರೇರಣೆ ಕೊಟ್ಟಷ್ಟು ಬೇರೆ ಯಾವುದೂ ಕೊಡಲು ಸಾಧ್ಯ ಇಲ್ಲ! 1983 ಜೂನ್ 25ರಂದು ಲಾರ್ಡ್ಸ್ ಮೈದಾನದ ಎತ್ತರದ ಗ್ಯಾಲರಿಯಲ್ಲಿ ನಿಂತು ಭಾರತದ ಮೊತ್ತ ಮೊದಲ ವಿಶ್ವಕಪ್ಪನ್ನು ಕಪಿಲದೇವ್ ಎತ್ತಿ ಹಿಡಿದ ಕ್ಷಣವನ್ನು ಯಾರೂ ಮರೆಯುವ ಹಾಗಿಲ್ಲ! ಇಂದು ಭಾರತದಲ್ಲಿ ಕ್ರಿಕೆಟ್ ಜೀವನ ಧರ್ಮ ಆಗಿದೆ. BCCI ಇಂದು ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗಿದೆ. ಇದಕ್ಕೆಲ್ಲ ಕಾರಣವಾದ ಚಿನ್ನದ ಕ್ಷಣ ಅದು. ಕಪಿಲ್ ಮತ್ತವರ ಹುಡುಗರ ಸಾಧನೆ ನಿಜಕ್ಕೂ ಶ್ಲಾಘನೀಯ. ಭಾರತಕ್ಕೆ ಸ್ಫೂರ್ತಿದಾಯಕ!
ಕಪಿಲ್ ಹರ್ಯಾಣದ ಒಬ್ಬ ಮರದ ವ್ಯಾಪಾರಿಯ ಮಗ. 14 ವರ್ಷದವರೆಗೆ ಯಾವ ಕ್ರಿಕೆಟ್ ಗೊಡವೆ ಇಲ್ಲದೆ ಬೆಳೆದವರು. ಫುಟ್ಬಾಲ್ ಮಾತ್ರ ಅವರ ಆಸಕ್ತಿಯ ಕ್ಷೇತ್ರ. ಒಮ್ಮೆ ಒಬ್ಬ ಕೋಚ್ ಅವರನ್ನು ಗಮನಿಸಿ “ಹುಡುಗ, ನಿನ್ನ ಬಾಹುಗಳು ಕೂಡ ಸ್ಟ್ರಾಂಗ್ ಇವೆಯಲ್ಲ. ನೀನೇಕೆ ಕ್ರಿಕೆಟ್ ಪ್ರಯತ್ನ ಮಾಡಬಾರದು?” ಅಂದದ್ದೇ ಪ್ರೇರಣೆ!
ಅಂದಿನಿಂದಲೆ ಕ್ರಿಕೆಟ್ಟನ್ನು ಅವರು ಬಹಳ ಗಂಭೀರವಾಗಿ ಪರಿಗಣಿಸಿದರು. ಕೇವಲ 16ನೆ ವಯಸ್ಸಿಗೆ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದರು. ನಂತರ ನಡೆದದ್ದು ಎಲ್ಲವೂ ಇತಿಹಾಸ! ಭಾರತೀಯ ಕ್ರಿಕೆಟ್ ಜಗತ್ತಿನ ಸುವರ್ಣ ಪುಟ!
ಕಪಿಲದೇವ್ ಒಬ್ಬ ಹುಟ್ಟು ಹೋರಾಟಗಾರ. ಜಗತ್ತು ಕಂಡ ಒಬ್ಬ ಶ್ರೇಷ್ಟ ಆಲರೌಂಡರ್. ಮಹೋನ್ನತ Motivating Captain. ಎಲ್ಲಕಿಂತ ಹೆಚ್ಚಾಗಿ ಒಬ್ಬ ಸಜ್ಜನ, ಹೃದಯವಂತ ಭಾರತೀಯ.
16 ವರ್ಷಗಳ ಕಾಲ ಭಾರತ ತಂಡದ ಭಾಗವಾಗಿ ಆಡಿದ, ಯುವ ಆಟಗಾರರನ್ನು ಬೆಳೆಸಿದ ಕೀರ್ತಿ ಅವರದ್ದು. ಭಾರತದಲ್ಲಿ ಬೌಲಿಂಗ್ ಅಂದರೆ ಕೇವಲ ಸ್ಪಿನ್ ಮಾತ್ರ ಎಂದು ನಂಬಿದ್ದ ಕಾಲದಲ್ಲಿ ಮೂಡಿದ ಮೊದಲ ವೇಗದ ಬೌಲರ್. ಕಪಿಲ್ ತನ್ನ ದಾಖಲೆಗಾಗಿ ಯಾವತ್ತೂ ಆಡದೆ ತಂಡದ ಯಶಸ್ಸಿಗಾಗಿ ಮಾತ್ರ ಆಡುತ್ತಿದ್ದರು. ಒಬ್ಬ ಅದ್ಭುತ ವೇಗದ ಬೌಲರ್ ಆಗಿ ಜೊತೆಗೆ ಮಿಡ್ಲ್ ಆರ್ಡರ್ ಬ್ಯಾಟ್ಸಮನ್ ಆಗಿ ಮಿಂಚಿದ್ದ ಕಪಿಲ್ ನಿಜಕ್ಕೂ ಅದ್ಭುತ ಕ್ರಿಕೆಟರ್!
ಅವರ ಕೆಲವು ದಾಖಲೆಗಳು ಈ ರೀತಿ ಇವೆ.
☑ ಅವರು ಭಾರತದ ಅತೀ ಶ್ರೇಷ್ಟ ಕ್ಯಾಪ್ಟನ್. 1983ರ ವಿಶ್ವಕಪ್ ವಿಜೇತ ಕ್ಯಾಪ್ಟನ್. ಅದು ಭಾರತದ ಮೊದಲ ವಿಶ್ವಕಪ್ ಆಗಿತ್ತು.
☑ ಟೆಸ್ಟ್ ಕ್ರಿಕೆಟಲ್ಲಿ 400 ಪ್ಲಸ್ ವಿಕೆಟ್ ಮತ್ತು 5000 ಪ್ಲಸ್ ರನ್ ಗಳಿಸಿದ ಜಗತ್ತಿನ ಏಕೈಕ ಆಲ್ರೌಂಡರ್!
☑ 100/200/300 ಟೆಸ್ಟ್ ವಿಕೆಟುಗಳನ್ನು ಅತೀ ಸಣ್ಣ ವಯಸ್ಸಲ್ಲಿ ದಾಖಲಿಸಿದ ಬೆಸ್ಟ್ ಬೌಲರ್!
☑ 184 ಟೆಸ್ಟ್ ಇನ್ನಿಂಗ್ಸಗಳಲ್ಲಿ ಒಮ್ಮೆ ಕೂಡ ರನ್ ಔಟ್ ಆಗದ ಒಬ್ಬನೇ ಒಬ್ಬ ಕ್ರಿಕೆಟರ್!
☑ 16 ವರ್ಷಗಳಲ್ಲಿ ಫಿಟ್ನೆಸ್ ಕಾರಣಕ್ಕೆ ಒಂದು ಟೆಸ್ಟ್ ಪಂದ್ಯ ಕೂಡ ಕಳೆದುಕೊಳ್ಳದೇ ನಿರಂತರ ಆಡಿದ ಒಬ್ಬನೇ ಕ್ರಿಕೆಟರ್!
☑ ಟೆಸ್ಟ್ ಪಂದ್ಯದಲ್ಲಿ ಅವರ ದಾಖಲೆಗಳು – 131ಟೆಸ್ಟ್, 5248 ರನ್, 8 ಶತಕ, 27 ಅರ್ಧ ಶತಕ, 163ಅತ್ಯಧಿಕ, 434 ವಿಕೆಟ್.
☑ ODI ದಾಖಲೆ – 225 ಪಂದ್ಯ 3783 ರನ್,1 ಶತಕ, 14 ಅರ್ಧ ಶತಕ, ಅತ್ಯಧಿಕ 175, ವಿಕೆಟ್ 253.
ಈ ದಾಖಲೆಗಳಿಗಿಂತ ಭಾರತೀಯರಿಗೆ ಹೆಚ್ಚು ಸ್ಮರಣೀಯವಾದದ್ದು 1983ರ ವಿಶ್ವಕಪ್ ವಿಜಯ!(ಅದರ ಬಗ್ಗೆ ವಿಸ್ತಾರವಾಗಿ ಇನ್ನೊಮ್ಮೆ ಬರೆಯುತ್ತೇನೆ). ಅದುವರೆಗೆ ನಡೆದ ಎರಡು ವಿಶ್ವಕಪ್ ಕೂಡ ಗೆದ್ದಿದ್ದ ಬಲಿಷ್ಟ ವಿಂಡೀಸ್ ಹೆಚ್ಚು ಕಡಮೆ ಅದೇ ತಂಡ ದೊಂದಿಗೆ ಇಂಗ್ಲೆಂಡಿಗೆ ಬಂದಿತ್ತು. ಎಲ್ಲರೂ ಬಲಿಷ್ಟ ಆಟಗಾರರು. ಭಾರತೀಯ ತಂಡದಲ್ಲಿ ಒಬ್ಬರು ಕೂಡ ಸ್ಟಾರ್ ಪ್ಲೇಯರ್ ಇರಲಿಲ್ಲ. ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ ಕಪಿಲ್ ತನ್ನ ತಂಡಕ್ಕೆ ಹೇಳಿದ್ದು ಈ ಪ್ರೇರಣೆಯ ಮಾತುಗಳು – “ಗೆಳೆಯರೇ, ನಮ್ಮ ಮೇಲೆ ಯಾವ ಒತ್ತಡವೂ ಇಲ್ಲ. ಆದರೆ ವೆಸ್ಟ್ ಇಂಡೀಸ್ ತಂಡಕ್ಕೆ ಕಪ್ ಉಳಿಸಿಕೊಳ್ಳುವ ಅನಿವಾರ್ಯ ಒತ್ತಡವಿದೆ! ನಾವು ಸೋತರೆ ಕಳೆದುಕೊಳ್ಳುವುದು ಏನೂ ಇಲ್ಲ. ಆದ್ದರಿಂದ ನಿಮ್ಮ ಸಹಜ ಆಟ ಆಡಿ ಸಾಕು!” ಇದು ಭಾರತದ ಎಳೆಯರ ತಂಡಕ್ಕೆ ಅದ್ಭುತ ಟಾನಿಕ್ ಆಗಿತ್ತು. ಇಡೀ ವಿಶ್ವಕಪ್ ಪಂದ್ಯಗಳಲ್ಲಿ ಕಪಿಲ್ ದೇವ್ ನೀಡಿದ ನಾಯಕತ್ವ, ತುಂಬಿದ ಸ್ಫೂರ್ತಿ ನಿಜಕ್ಕೂ ಅದ್ಭುತ!
ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯದಲ್ಲಿ 17/5 ಸ್ಥಿತಿಯಲ್ಲಿ ಭಾರತ ಒದ್ದಾಡುತ್ತ ಇದ್ದಾಗ ಬ್ಯಾಟ್ ಹಿಡಿದು ಬಂದ ಕಪಿಲ್ ದೇವ್ ಆಡಿದ ಇನ್ನಿಂಗ್ಸ್ ಅದೊಂದು ಸ್ಸುನಾಮಿ! ಬಾಲಂಗೋಚಿಗಳ ಬೆಂಬಲ ಪಡೆದು 138 ಎಸೆತಗಳಲ್ಲಿ 175 ರನ್ನುಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದು ಮರೆತು ಹೋಗಲ್ಲ!
ಅದೇ ರೀತಿ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಡುತ್ತಿದ್ದಾಗ ವಿವಿಯನ್ ರಿಚರ್ಡ್ಸ್ ಆಕಾಶಕ್ಕೆ ಚಿಮ್ಮಿದ ಚೆಂಡನ್ನು 20 ಗಜಗಳಷ್ಟು ಹಿಂದೆ ಓಡಿ ಕಪಿಲ್ ದೇವ್ ಹಿಡಿದ ಕ್ಯಾಚ್ ಓಹ್! ಅದಕ್ಕೆ ಉಪಮೆ ಇಲ್ಲ.
ಇಂತಹ ಹತ್ತಾರು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿ ಹೋದ ವಿಶ್ವಕಪ್ ವಿಜಯವು ಸದಾ ಸ್ಮರಣೀಯ!
ನಿವೃತ್ತಿ ನಂತರ ಕೂಡ ಕಪಿಲ್ ಭಾರತ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದರು. Wisdon ಪತ್ರಿಕೆ ಅವರನ್ನು 2002ರಲ್ಲಿ ಶತಮಾನದ ಭಾರತೀಯ ಕ್ರಿಕೆಟರ್ ಎಂದು ಹೆಸರಿಸಿ ಗೌರವಿಸಿತು.
ಮುಂದೆ ಅವರಿಗೆ ಬಹುಮೂಲ್ಯ ಪದ್ಮಶ್ರೀ, ಪದ್ಮಭೂಷಣ, ಅರ್ಜುನ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಅವರ ಆತ್ಮಚರಿತ್ರೆ Straight from the Heart ಬಹಳ ಸೊಗಸಾಗಿ ಮೂಡಿಬಂದಿದೆ. ಅವರ ಬದುಕನ್ನು ಆಧರಿಸಿದ ಹಿಂದಿ ಸಿನೆಮಾ ’83’ ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಭಾರತೀಯರ ಹೃದಯದಲ್ಲಿ ಕಪಿಲ್ ದೇವ್ ಒಂದು ಶಾಶ್ವತ ಸ್ಥಾನ ಪಡೆದಿದ್ದಾರೆ. ಇಂದವರ ಹುಟ್ಟಿದ ಹಬ್ಬ. ಹ್ಯಾಪಿ ಬರ್ತಡೇ ಲೆಜೆಂಡ್.
☑ ರಾಜೇಂದ್ರ ಭಟ್ ಕೆ.

Leave a Reply

Your email address will not be published.