ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)

ಮುಂಬೈಯ BNHS ಸಂಸ್ಥೆ ಸೇರಿದ ಹುಸೇನ್ ಸಾಹೇಬರು ಸಲೀಂ ಅಲಿ ಅವರ ಶಿಷ್ಯನಾಗಿ ಮೊದಲು ಆರಿಸಿದ ಪ್ರಾಜೆಕ್ಟ್ ಎಂದರೆ ವಲಸೆ ಹಕ್ಕಿಗಳ ಬದುಕಿನ ಬಗ್ಗೆ ಅಧ್ಯಯನ. ಭಾರತದ ಹಕ್ಕಿ ತಾತ ಸಲೀಂ ಆಲಿ ಅವರು ತಮ್ಮ ಶಿಷ್ಯನ ಸಾಮರ್ಥ್ಯವನ್ನು ಮನಗಂಡು ಅವರಿಗೆ ಸಾಕಷ್ಟು ಸವಾಲಿನ ಪ್ರಾಜೆಕ್ಟಗಳನ್ನು ಕೊಡಲು ಆರಂಭ ಮಾಡಿದರು. ಗುರು ಶಿಷ್ಯರು ಇಬ್ಬರೂ ಗನ್, ದುರ್ಬೀನು, ಕ್ಯಾಮೆರಾ, ನೋಟ್ ಬುಕ್ ಮತ್ತು ಪೆನ್ ಹಿಡಿದು ಕಾಡಿನ ಒಳಗೆ ಹೋದರೆ ಊಟ ತಿಂಡಿ ಮರೆತೇ ಬಿಡುತ್ತಿದ್ದರು. ಸಲೀಂ ಆಲಿಯವರ ಕ್ಯಾಮೆರಾ ಮತ್ತು ಗನ್ ಬಳಸುವ ಸ್ವಾತಂತ್ರ್ಯ ಅವರ ಸಂಸ್ಥೆಯಲ್ಲಿ ಕೇವಲ ಹುಸೇನರಿಗೆ ಮಾತ್ರ ದೊರೆತಿತ್ತು.
ಹುಸೇನರಿಗೆ ದೊರೆತ ಮಹೋನ್ನತ ಅವಕಾಶ ಎಂದರೆ ಈವರೆಗೆ ಮನುಷ್ಯರೇ ಹೋಗದ ಅಂಡಮಾನಿನ ನಾರ್ಕೊಂಡಮ್ ಎಂಬ ಪ್ರದೇಶಕ್ಕೆ ಹೋಗಿ ಅಲ್ಲಿ ಹಕ್ಕಿಗಳ ಅಧ್ಯಯನ ನಡೆಸುವುದು. ಅದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿದ ಹುಸೇನ್ ಸಾಹೇಬರು ಅಲ್ಲಿಗೆ ಒಬ್ಬರೇ ಹೋದರು. ಅಲ್ಲಿ ಮಾತ್ರ ಕಂಡು ಬರುವ ಮತ್ತು ಜಗತ್ತಿನ ಬೇರೆ ಎಲ್ಲೂ ಕಂಡುಬರದ ಹಕ್ಕಿಯನ್ನು ಅಧ್ಯಯನ ಮಾಡಿ ಬಂದರು. ಅಲ್ಲಿಂದ ಬಂದ ತಕ್ಷಣ ಅವರನ್ನು ಲಡಾಖಿನ ರಕ್ತ ಹೆಪ್ಪುಗಟ್ಟುವ ಚಳಿಯ ಪ್ರದೇಶಕ್ಕೆ ಸಂಸ್ಥೆ ಕಳುಹಿಸಿತು. ಅಲ್ಲಿ ಅತ್ಯಂತ ಅಪರೂಪದ ಕಪ್ಪುಕೊರಳಿನ ಕೊಕ್ಕರೆಯ ಸಂಶೋಧನೆ ಮಾಡಿ ಬಂದ ಹುಸೇನ್ ಸಾಹೇಬರು ಜಗತ್ತಿನ ಗಮನ ಸೆಳೆದರು. ಯಾಕೆಂದರೆ ಅವರು ಸಂಶೋಧನೆ ಮಾಡಿದ ಎರಡು ಹಕ್ಕಿಗಳು ಜಗತ್ತಿನ ಯಾವ ವಿಜ್ಞಾನಿಗಳ ಗಮನಕ್ಕೂ ಅದುವರೆಗೆ ಬಂದಿರಲಿಲ್ಲ! ಸಲೀಂ ಆಲಿ ತಮ್ಮ ಶಿಷ್ಯನನ್ನು ತಬ್ಬಿಕೊಂಡು ಶಾಭಾಶ್ ಅಂದರು.
ಜಲಾನಯನ ಪ್ರದೇಶದ ಹಕ್ಕಿಗಳ ಬಗ್ಗೆ ಅವರು ಮಾಡಿದ ಅವಲೋಕನ ಮತ್ತು ಅಧ್ಯಯನಗಳು ಅಸದೃಶ ಮತ್ತು ಅನನ್ಯ ಎಂದು ವಿದೇಶದ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಯಾವ ಹಕ್ಕಿಯನ್ನು ಕೂಡ ಅದರ ಧ್ವನಿಯಿಂದಲೆ ಗುರುತು ಹಿಡಿಯಬಲ್ಲ, ಅವುಗಳೊಂದಿಗೆ ಸಂಭಾಷಣೆ ಮಾಡಬಲ್ಲ ಶಕ್ತಿ ಅವರಿಗೆ ಬಂದಿತ್ತು. ಹಕ್ಕಿಗಳ ಧ್ವನಿಯನ್ನು ತನ್ನ ಪುಟ್ಟ ಟೇಪ್ ರೆಕಾರ್ಡರಲ್ಲಿ ರೆಕಾರ್ಡ್ ಮಾಡಿ ತಂದು ಅದಕ್ಕೆ ಸ್ಕ್ರಿಪ್ಟ್ ಬರೆದು ಹಕ್ಕಿಗಳಿಗೆ ಕೂಡ ಭಾಷೆ ಇದೆ, ಅವುಗಳು ನಮಗಿಂತ ಉತ್ತಮವಾಗಿ ಸಂವಹನ ಮಾಡುತ್ತವೆ ಎಂದು ಅವರು ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ.
ಅವರ ಹಕ್ಕಿ ಲೋಕದ ಲೇಖನಗಳು ಅಂತಾರಾಷ್ಟ್ರೀಯ ಮ್ಯಾಗಜೀನಗಳಲ್ಲಿ ಪಬ್ಲಿಷ್ ಆಗಿವೆ. ಅವರು ಹಕ್ಕಿಗಳ ಬದುಕಿನ ಬಗ್ಗೆ, ಅವುಗಳ ಸಂವಹನ ಸಾಮರ್ಥ್ಯಗಳ ಬಗ್ಗೆ, ವಾಸ ಸ್ಥಾನಗಳ ಬಗ್ಗೆ, ಅವುಗಳ ಸೂಕ್ಷ್ಮ ಸಂವೇದನೆಗಳ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಅವೆಲ್ಲವೂ ಅದ್ಭುತವೇ ಆಗಿವೆ. ಜಪಾನ್, ಅಮೆರಿಕಾ, ಇಂಗ್ಲೇಂಡಗಳಲ್ಲಿ ಅವರು ನಡೆಸಿದ ಹಕ್ಕಿ ವಿಜ್ಞಾನದ ಸಮಾವೇಶಗಳು, ವಿಚಾರ ಸಂಕಿರಣಗಳು ಲೆಕ್ಕವಿಲ್ಲದಷ್ಟು. 1990ರಲ್ಲಿ ಅವರು BNHS ಸಂಸ್ಥೆಯ ಡೆಪ್ಯುಟಿ ಡೈರೆಕ್ಟರ್ ಆಗಿ ನಿವೃತ್ತರಾದರು.
ಫಿಲಿಪೈನ್ಸ್ ದೇಶವು ನಮ್ಮ ಹುಸೇನ್ ಸಾಹೇಬ್ರನ್ನು ತಮ್ಮ ಸರಕಾರದ ವೈಜ್ಞಾನಿಕ ಸಲಹೆಗಾರರಾಗಿ ನೇಮಕ ಮಾಡಿತು ಮತ್ತು ತನ್ನ ಮೀನಿನ ಕ್ಷಾಮವನ್ನು ಪರಿಹಾರ ಮಾಡಿಕೊಂಡಿತು. ಕರ್ನಾಟಕದ ವನ್ಯಜೀವಿ ಸಂಸ್ಥೆಯ ಸಲಹೆಗಾರರಾಗಿ, ಬರ್ಡ್ ಲೈಫ್ ಇಂಟರನ್ಯಾಷನಲ್ ಎಂಬ ಸಂಸ್ಥೆಯ ಏಷಿಯಾ ಮಟ್ಟದ ಮಾರ್ಗದರ್ಶಕರಾಗಿ ಅವರ ಸುದೀರ್ಘ ಸೇವೆಯು ಅತ್ಯಂತ ಮಹತ್ವದ್ದು. ಮುಖ್ಯವಾಗಿ ಉಡುಪಿ ಜಿಲ್ಲೆಯ ಕೆಲವು ಪ್ರಸಿದ್ಧರಾದ ಜೀವಶಾಸ್ತ್ರ ಪ್ರಾಧ್ಯಾಪಕರ ಜೊತೆ ಸೇರಿ ಅವರು ಮಾಡಿದ ಕುದುರೆಮುಖ ಸಂರಕ್ಷಿತ ಅರಣ್ಯ ಪ್ರದೇಶದ ಜೀವವೈವಿಧ್ಯ ದಾಖಲಾತಿಯು ( Registration of Bio Diversity) ಬಹಳ ಮುಖ್ಯವಾದದ್ದು. ಆಗ ಅವರ ಜೊತೆ ನನ್ನ ಗುರುಗಳಾದ ಡಾಕ್ಟರ್ ಪ್ರಭಾಕರ್ ಆಚಾರ್ ಅವರು ಕೂಡ ಕೆಲಸ ಮಾಡಿದ್ದು ನನಗೆ ನೆನಪಿದೆ.
ಕುದುರೆಮುಖವನ್ನು ಗಣಿಗಾರಿಕೆಯ ಹೆಸರಲ್ಲಿ ಹಾಳು ಮಾಡುವುದಕ್ಕಿಂತ ಅದನ್ನು ಜೀವ ವೈವಿಧ್ಯತೆಯ ತಾಣ( Bio Diversity Hotspot) ಆಗಿ ಬೆಳೆಸಬೇಕೆಂದು ಅವರ ಕಾಳಜಿ ಅತ್ಯಂತ ಶ್ಲಾಘನೀಯ ಆಗಿತ್ತು. ಇದರ ಬಗ್ಗೆ ಅವರು ಮಾಡಿದ ಹೋರಾಟವೂ ಬಹಳ ಎತ್ತರಕ್ಕೆ ಹೋಗಿತ್ತು.
ನಿವೃತ್ತಿಯ ನಂತರ ಅವರು ತಮ್ಮ ಹುಟ್ಟೂರಾದ ಕಾರ್ಕಳಕ್ಕೆ ಬಂದರು. ಬಾಲ್ಯದಲ್ಲಿ ತಮ್ಮ ದಿನದ ಹೆಚ್ಚು ಹೊತ್ತನ್ನು ಕಳೆಯುತ್ತಿದ್ದ ಆನೆಕೆರೆಯ ಪ್ರದೇಶಕ್ಕೆ ಬಂದು ಅವರು ಗಂಟೆಗಳ ಕಾಲ ಕುಳಿತು ಬಿಡುತ್ತಿದ್ದರು. ಹಕ್ಕಿಗಳ
ಕಲರವದಲ್ಲಿ ಮೈಮರೆತು ಬಿಡುತ್ತಿದ್ದರು. ಹಕ್ಕಿಗಳ ಜೊತೆಗೆ ಸಂಭಾಷಣೆ ಮಾಡುತ್ತಿದ್ದರು. ಶಾಲೆ ಕಾಲೇಜುಗಳಿಗೆ ಹೋಗಿ ಮಕ್ಕಳ ಜೊತೆ ಮಕ್ಕಳಾಗಿ ಹಕ್ಕಿಗಳ ಬಣ್ಣ ಬಣ್ಣದ ಕಥೆ ಹೇಳುತ್ತಿದ್ದರು.
ಕಾರ್ಕಳದ ಆನೆಕೆರೆಯನ್ನು ಶಾಶ್ವತವಾದ ನೀರ್ನೇಲೆ ಆಗಿ ಅಭಿವೃದ್ಧಿ ಪಡಿಸಬೇಕು. ಅದರಲ್ಲಿ ಬೋಟಿಂಗ್ ಮೊದಲಾದ ವಾಣಿಜ್ಯ ಚಟುವಟಿಕೆ ಮಾಡಬಾರದು ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು.” ಸರಕಾರಗಳು ಪರಿಸರವನ್ನು ವಾಣಿಜ್ಯದ ಚಟುವಟಿಕೆಗೆ ಉಪಯೋಗ ಮಾಡಲೇಬಾರದು!” ಎಂದು ಅವರು ಪ್ರತೀ ವೇದಿಕೆಯಲ್ಲಿ ಹೇಳುತ್ತಿದ್ದ ಮಾತು.
2009ನೆಯ ಡಿಸೆಂಬರ್ ತಿಂಗಳ 30ರಂದು ಅವರು ಹಕ್ಕಿಗಳ ಅನೂಹ್ಯ ಲೋಕಕ್ಕೆ ಹೊರಟು ಹೋದರು. ಇಡೀ ಜೀವನದಲ್ಲಿ ಮದುವೆ ಆಗದೆ ಪ್ರತೀ ಕ್ಷಣವನ್ನು ಕೂಡ ಪರಿಸರ, ಹಕ್ಕಿ, ವನ್ಯಜೀವಿಗಳ ಮಧ್ಯೆ ಕಳೆದರು. ಅವರಿಗೆ ಬಾಲ್ಯದಿಂದ ಒಂದು ಹೃದಯದ ಕಾಯಿಲೆ ಇತ್ತು ಎಂದು ಒಂದೆಡೆ ಅವರೇ ಹೇಳಿಕೊಂಡಿದ್ದಾರೆ.
🙏ಕಾರ್ಕಳದ ಹೆಮ್ಮೆಯ ನಮ್ಮ ಹುಸೇನ್ ಸಾಹೇಬ್ರಿಗೆ ನೂರಾರು ನಮನಗಳು.
☑ ಸ್ಫೂರ್ತಿ -ರೋಹಿತ್ ಚಕ್ರತೀರ್ಥ ಅವರ ಲೇಖನ.
☑ ರಾಜೇಂದ್ರ ಭಟ್ ಕೆ.

Leave a Reply

Your email address will not be published.