ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

ಕಾರ್ಕಳದಿಂದ ಹೊರಟ ಓರ್ವ ಅಸಾಧಾರಣ ಸಾಧಕ ಹಕ್ಕಿಗಳನ್ನು ಪ್ರೀತಿಸುತ್ತಾ, ಅವುಗಳ ಬಗ್ಗೆ ಸಂಶೋಧನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಮಿಂಚಿದ್ದು ನಿಜಕ್ಕೂ ಅದ್ಭುತ! ಹಕ್ಕಿ ತಾತ ಎಂದು ಕರೆಸಿಕೊಂಡ ಸಲೀಂ ಆಲಿ ಅವರ ಶಿಷ್ಯನಾಗಿ ಅವರು ಹಕ್ಕಿಗಳ ಅನೂಹ್ಯವಾದ ಜಗತ್ತಿನಲ್ಲಿ ಮಕ್ಕಾ ಮತ್ತು ಮದೀನಾಗಳನ್ನು ಕಂಡದ್ದು ಒಂದು ರೋಚಕವಾದ ಇತಿಹಾಸ! ಅವರೇ ನಮ್ಮ ಇಂದಿನ ಐಕಾನ್ ಸೈಯ್ಯದ್ ಅಬ್ದುಲ್ಲಾ ಹುಸೇನ್.
ಅವರು ಹುಟ್ಟಿದ್ದು, ತನ್ನ ಬಾಲ್ಯವನ್ನು ಕಳೆದದ್ದು, ಕಾಲೇಜು ಶಿಕ್ಷಣ ಪಡೆದದ್ದು, ನಿವೃತ್ತಿ ಜೀವನವನ್ನು ನಡೆಸಿದ್ದು, ಕೊನೆಗೆ ಮರಣ ಹೊಂದಿದ್ದು ಕೂಡ ಕಾರ್ಕಳದಲ್ಲಿ. ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ತಂದೆ ಮದ್ರಾಸು ರೆಸಿಡೆನ್ಸಿಯಲ್ಲಿ ಶಾಸಕರು. ಜೊತೆಗೆ ವಕೀಲರು ಕೂಡ. ಈ ಹುಡುಗನ ಮೇಲೆ ಅಮ್ಮನ ಪ್ರಭಾವ ಹೆಚ್ಚು. ಹುಡುಗನು ಬಾಲ್ಯದಿಂದಲೂ ಮೌನಿ. ಅಂತರ್ಮುಖಿ. ಬಿಡುವು ಇದ್ದಾಗ ಪರಿಸರದ ನಡುವೆ ಹೋಗಿ ಹಕ್ಕಿಗಳ ಚಿಲಿಪಿಲಿ ಆಲಿಸುವುದು, ಅವುಗಳನ್ನು ಗಮನಿಸುವುದು ಹವ್ಯಾಸ. ಆಗ ನಡೆದ ಒಂದು ಘಟನೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು.
ಅವರ ಮನೆಯ ಅಂಗಳದಲ್ಲಿ ಒಂದು ರಾಮ ಫಲದ ಮರದಲ್ಲಿ ಎರಡು ಪುಟ್ಟ ಹಕ್ಕಿಗಳು ಗೂಡು ಕಟ್ಟಿದ್ದವು. ಒಂದು ದಿನ ಮೊಟ್ಟೆಯನ್ನು ಇಟ್ಟವು. ಕುತೂಹಲದಿಂದ ಇದನ್ನು ನೋಡುತ್ತಿದ್ದ ಬಾಲಕ ಹುಸೇನ್ ಮರ ಏರಿ ಗೂಡಿಗೆ ಕೈಹಾಕಿದ. ಅಷ್ಟು ಹೊತ್ತಿಗೆ ಮರದ ಗೆಲ್ಲು ಮುರಿದು ಕೆಳಗೆ ಬಿದ್ದ. ಗೂಡು ಅವನ ಕೈಯ್ಯಲ್ಲಿ ಇತ್ತು. ಇದನ್ನು ನೋಡಿದ ಅಮ್ಮ ಅವನನ್ನು ಎತ್ತಲು ಓಡಿ ಬಂದರು. ಅವನ ಕೈಯ್ಯಲ್ಲಿ ಇದ್ದ ಹಕ್ಕಿ ಗೂಡು ನೋಡಿ ಸಿಟ್ಟಲ್ಲಿ ಕೆಂಡವಾಗಿ ಬಾಸುಂಡೆ ಬರುವಂತೆ ಹೊಡೆದರು. ಆ ಗೂಡನ್ನು ಮತ್ತೆ ಮರದಲ್ಲಿ ಇರಿಸಲು ಅಪ್ಪಣೆ ಕೊಟ್ಟರು. ನಾಳೆಯೊಳಗೆ ಹಕ್ಕಿಗಳು ಹಿಂದೆ ಬಾರದಿದ್ದರೆ ನಿನ್ನನ್ನು ಖಂಡಿತ ಮನೆಯಿಂದ ಹೊರಹಾಕುವೆ ಎಂದು ಗುಡುಗಿದರು. ಹುಡುಗನಿಗೆ ರಾತ್ರಿ ಇಡೀ ನಿದ್ದೆ ಬರ್ಲಿಲ್ಲ. ನಾಳೆ ಹಕ್ಕಿಗಳು ಹಿಂದೆ ಬರಲೀ ದೇವ್ರೆ ಎಂದು ಪ್ರಾರ್ಥನೆ ಮಾಡುತ್ತ ಮಲಗಿದ.
ಮನುಷ್ಯರು ಮುಟ್ಟಿದ ಗೂಡುಗಳ ಕಡೆಗೆ ಹಕ್ಕಿಗಳು ಹಿಂದೆ ಬರುವುದಿಲ್ಲ ಎಂದು ಅವನಿಗೆ ಯಾರೋ ಹೇಳಿ ಭಯ ಹುಟ್ಟಿಸಿದ್ದರು. ಆದರೆ ಹುಡುಗನ ಅಚ್ಚರಿಗೆ ಆ ಜೋಡಿ ಹಕ್ಕಿಗಳು ಮರುದಿನ ಗೂಡಿಗೆ ಬಂದೇ ಬಿಟ್ಟಿದ್ದವು!
ಅಲ್ಲಿಯವರೆಗೂ ಅವನ ಅಮ್ಮ ಅವನ ಹತ್ತಿರ ಮಾತನ್ನೇ ಆಡಿರಲಿಲ್ಲ. ತಮ್ಮ ಗೂಡಿನ ಒಳಗೆ ಇರುವ ಮರಿ ಹಕ್ಕಿಗಳ ರಕ್ಷಣೆಗೆ ಪೋಷಕ ಹಕ್ಕಿಗಳು ಬಂದೆ ಬರುತ್ತವೆ ಎಂಬ ಸತ್ಯ ಅವನಿಗೆ ಬಾಲ್ಯದಲ್ಲಿಯೇ ಗೊತ್ತಾಗಿ ಹೋಯಿತು. ಹಕ್ಕಿಗಳಿಗೆ ಮನುಷ್ಯನನ್ನು ಮೀರಿದ ಭಾವನೆಗಳು ಇವೆ ಎಂದು ಅವನಿಗೆ ಗೊತ್ತಾಯಿತು. ಹಕ್ಕಿಗಳು ಕೂಡ ಸೂಕ್ಷ್ಮ ಭಾವನೆಗೆ ಸ್ಪಂದಿಸುತ್ತವೆ ಮತ್ತು ಕೌಟುಂಬಿಕ ಹೊಣೆಯನ್ನು ಚೆನ್ನಾಗಿ ನಿಭಾಯಿಸುತ್ತವೆ ಎಂದು ಅವರಿಗೆ ಅರಿವಾಯಿತು. ಆ ಘಟನೆಯಿಂದ ಅವನ ಜೀವನವು ಭಾರೀ ಯು ಟರ್ನ್ ಪಡೆಯಿತು.
ಕಾರ್ಕಳದಲ್ಲಿ ಮೊದಲು ಬೋರ್ಡ್ ಹೈಸ್ಕೂಲಲ್ಲಿ ಪ್ರೌಢ ಶಿಕ್ಷಣವನ್ನು ಪಡೆದ ಹುಡುಗ ಮುಂದೆ ಅದೇ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪ್ರಾಣಿ ಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಅಲ್ಲಿಂದ ಕೆಲಸ ಹುಡುಕುತ್ತ ಮುಂಬೈಗೆ ಹೋಗಿ ಅಲ್ಲಿನ ” ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ” ಎಂಬ ಸಂಶೋಧನಾ ಸಂಸ್ಥೆಯನ್ನು ಸೇರಿದಾಯ್ತು.
ಆಗ ಆ ಸಂಸ್ಥೆಯಲ್ಲಿ ಸಂಶೋಧನಾ ಮುಖ್ಯಸ್ಥ ಆಗಿ ಇದ್ದವರು ಭಾರತದ ಹಕ್ಕಿ ತಾತ ಎಂದು ಕರೆಸಿಕೊಂಡ ಸಲೀಂ ಆಲಿ ಅವರು! ಅವರು ಭಾರೀ ಖಡಕ್ ಎಂದು ಪ್ರತೀತಿ ಹರಡಿತ್ತು. ಆದರೆ ನಮ್ಮ ಹುಸೇನ್ ಅವರನ್ನು ತಮ್ಮ ಗುರುವಾಗಿ ಸ್ವೀಕಾರ ಮಾಡಿದರು ಮತ್ತು ಅವರ ಪಟ್ಟ ಶಿಷ್ಯ ಆದರು. ತಾಳ್ಮೆಯಿಂದ ಗುರುವಿನ ಮನಸನ್ನು ಗೆದ್ದರು. ಈ ಗುರು ಶಿಷ್ಯರ ಸಂಬಂಧ ನಾಲ್ಕು ದಶಕಗಳನ್ನು ಮೀರಿ ನಿಂತಿತು. ಸಲೀಂ ಆಲಿ, ಅವರ ಶಿಷ್ಯರಾದ ಅಬ್ದುಲ್ಲಾ ಹುಸೇನ್, ಮತ್ತೊಬ್ಬ ಶಿಷ್ಯ ದಿಲ್ಲಾನ್ ರಿಪ್ಲೇ ಸೇರಿಕೊಂಡು ಹಿಮಾಲಯ, ಭೂತಾನ್, ಈಶಾನ್ಯ ಭಾರತ, ಬಾಂಗ್ಲಾ ದೇಶ, ರಾಜಸ್ಥಾನ್, ಗುಜರಾತಿನ ಕಛ್, ನೀಲಗಿರಿ ಬೆಟ್ಟ ಸುತ್ತಿ ಹಕ್ಕಿಗಳ ಬಗ್ಗೆ ಅವಲೋಕನ, ಸಂಶೋಧನೆ ಮತ್ತು ಅಧ್ಯಯನಕ್ಕೆ ಇಳಿದರು. ಅವರ ಎಲ್ಲಾ ಸಂಶೋಧನೆಗಳು ಕೂಡ ಜಗತ್ತಿನ ಗಮನ ಸೆಳೆದವು. ಅದೇ ಹೊತ್ತಿಗೆ ಅವರ ಬದುಕಿನಲ್ಲಿ ಇನ್ನೊಂದು ಮಹತ್ವದ ತಿರುವು ಬಂದಾಗಿತ್ತು!
( ನಾಳೆಗೆ ಮುಂದುವರೆಯುವುದು).
☑ ಸ್ಫೂರ್ತಿ – ರೋಹಿತ್ ಚಕ್ರತೀರ್ಥ ಅವರ ಲೇಖನ.
☑ ರಾಜೇಂದ್ರ ಭಟ್ ಕೆ.

Leave a Reply

Your email address will not be published.