ಇಂದಿನ ಐಕಾನ್ ಸ್ವಾಮಿ ವಿವೇಕಾನಂದರು

🙏 ವಿವೇಕಾನಂದರು ಇಲ್ಲದ ಭಾರತವನ್ನು ಇಂದಿಗೂ ಊಹೆ ಮಾಡುವುದು ನನಗೆ ಕಷ್ಟ. “ಭಾರತವನ್ನು ಓದಬೇಕೆಂದು ನೀವು ಬಯಸಿದರೆ ವಿವೇಕಾನಂದರನ್ನು ಓದಿ” ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತೀ ವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ ಬಗ್ಗೆ ಮರು ಓದು ಆರಂಭ ಆಗುತ್ತದೆ. ನಮ್ಮ ದೇಶದ ಬಲಿಷ್ಟ ಯುವಜನತೆಗೆ ಹಿಂದೆ, ಇಂದು ಮತ್ತು ಮುಂದು ಕೂಡ ಅವರೇ ನಿಜವಾದ ಐಕಾನ್. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಶತಮಾನವೆ ಸಂದರೂ ಅವರ ತತ್ವ, ಬೋಧನೆಗಳು ಸಾರ್ವತ್ರಿಕ ಸತ್ಯವಾಗಿ ಕಣ್ಣ ಮುಂದೆ ಇರುತ್ತವೆ. ಬೆಳಕಿನ ಕಿರಣ ಚೆಲ್ಲುತ್ತವೆ.
ವಿವೇಕಾನಂದರು ಅಂದ ಕೂಡಲೇ ನಮಗೆ ಮೊದಲು ನೆನಪಾಗುವುದು ಅವರು ಮಾಡಿದ್ದ ಅಮೆರಿಕಾದ ಭಾಷಣ. 1893 ಸೆಪ್ಟೆಂಬರ್ 11ರಂದು ಜಾಗತಿಕ ಮಟ್ಟದ ಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣವು ಭಾರತಕ್ಕೆ ಒಂದು ಅದ್ಭುತವಾದ ಪ್ರಭಾವಳಿ ತೊಡಿಸಿತ್ತು. ಅದುವರೆಗೆ ಭಾರತ ಅಂದರೆ ಕೇವಲ ಗುಡಿಸಲುಗಳ ರಾಷ್ಟ್ರ, ಕೊಳಚೆಗೇರಿಗಳ ರಾಷ್ಟ್ರ, ಮೌಢ್ಯಗಳ ರಾಷ್ಟ್ರ, ಪುಂಗಿ ಊದುವವರ ರಾಷ್ಟ್ರ ಎಂದು ಪಾಶ್ಚಾತ್ಯರಿಂದ ಅಪಹಾಸ್ಯಕ್ಕೆ ಈಡಾಗಿದ್ದ ಭಾರತಕ್ಕೆ ಅವರ ಭಾಷಣವು ಚೇತೋಹಾರಿ ಆಯಿತು. ಅವರ ಭಾಷಣ ಕೇಳಿದ್ದ ವಿದೇಶಿ ವಿದ್ವಾಂಸರು ‘ಭಾರತ ಎಲ್ಲಿದೆ? ನಾವೊಮ್ಮೆ ನೋಡಬೇಕಲ್ಲಾ!’ ಎಂದು ಉದ್ಗಾರ ಮಾಡಿದ್ದರೆ ಅದಕ್ಕೆ ಕಾರಣ ಖಂಡಿತವಾಗಿಯು ಸ್ವಾಮಿ ವಿವೇಕಾನಂದರು.
ಆದರೆ ವಿವೇಕಾನಂದರು ಅಂದರೆ ಕೇವಲ ಅಮೆರಿಕಾದ ಭಾಷಣ ಅಲ್ಲ!
ಸ್ವಾಮೀಜಿ ತನ್ನ ಭಾರತ ದೇಶದ ಮೂಲೆ ಮೂಲೆಗೂ ಸಂಚಾರ ಮಾಡಿ ತನ್ನ ಜನರ ಸಂಕಷ್ಟ, ಬಡತನ, ಹಸಿವು, ದಾರಿದ್ರ್ಯ, ಉದಾಸೀನ, ಅಶೃದ್ಧೆ, ಮೌಢ್ಯ, ಅಭಿಮಾನ ಶೂನ್ಯತೆ ಇವುಗಳನ್ನು ಹತ್ತಿರದಿಂದ ಗಮನಿಸಿದ್ದು ಮಾತ್ರವಲ್ಲ, ತನ್ನ ದೇಶದ ಯುವಜನತೆಯನ್ನು ಜಾಗೃತಿ ಮಾಡುವ, ಅವರಲ್ಲಿ ಆವರಿಸಿದ್ದ ಅಂಧಶೃದ್ಧೆಯನ್ನು ಮೆಟ್ಟಿ ನಿಲ್ಲುವ ಶಕ್ತಿ ತುಂಬಿದ್ದನ್ನು ನಾವು ಮರೆಯಬಾರದು.
ಅವರೊಬ್ಬ ಅದ್ಭುತ ದಾರ್ಶನಿಕ, ವಿಷನರಿ, ತತ್ವಜ್ಞಾನಿ, ಸನ್ಯಾಸಿ, ಚಿಂತಕ ಎಲ್ಲವೂ. ಒಂದು ಘಟನೆ ನಾನು ನಿಮಗೆ ನೆನಪಿಸಬೇಕು.
1897ರ ಜನವರಿ ತಿಂಗಳಲ್ಲಿ ಸ್ವಾಮೀಜಿ ವಿದೇಶದ ಯಾತ್ರೆಗಳನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದಾಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು ಮತ್ತು ಭಾರತವು ಅದಕ್ಕೊಬ್ಬ ಸಮರ್ಥ ನಾಯಕನ ಹುಡುಕಾಟ ನಡೆಸಿತ್ತು. ಆಗ ಕೆಲವು ಸ್ವಾತಂತ್ರ್ಯದ ಯೋಧರು ಸ್ವಾಮಿಯನ್ನು ಭೇಟಿ ಮಾಡಿ ‘ನಮಗೆ ನಿಮ್ಮ ನಾಯಕತ್ವ ಬೇಕು. ನಮ್ಮೊಂದಿಗೆ ಹೋರಾಟಕ್ಕೆ ಬನ್ನಿ’ ಅಂದಾಗ ಸ್ವಾಮೀಜಿ ಹೇಳಿದ ಮಾತು ಅತ್ಯಂತ ಮಾರ್ಮಿಕ ಆಗಿತ್ತು. ‘ನಾನು ಸನ್ಯಾಸಿ. ಬೀದಿಗಿಳಿದು ಹೋರಾಟ ಮಾಡಲಾರೆ. ನನ್ನ ಕೆಲಸ ಜಾಗೃತಿಯನ್ನು ಮೂಡಿಸುವುದು ಮಾತ್ರ. ನೀವು ನಿಮ್ಮ ಹೋರಾಟ ಮುಂದುವರೆಸಿ. ನಾನಿದ್ದರೂ, ಇಲ್ಲದಿದ್ದರೂ ಮುಂದಿನ ಐವತ್ತು ವರ್ಷಗಳ ಒಳಗೆ ಭಾರತವು ಸ್ವಾತಂತ್ರ್ಯವನ್ನು ಪಡೆಯುವುದು ಖಂಡಿತ ‘ ಅಂದರು. ಅವರು ಹೇಳಿದ ಮಾತಿನಂತೆ ಅಂದಿಗೆ ಸರಿಯಾಗಿ ಐವತ್ತು ವರ್ಷಗಳ ನಂತರ ಭಾರತವು ಸ್ವಾತಂತ್ರ್ಯವನ್ನು ಪಡೆಯಿತು! ಅದಕ್ಕಾಗಿ ನಾನು ಅವರನ್ನು ವಿಶನರಿ ಎಂದು ಕರೆದೆ.
ವಿವೇಕಾನಂದರ ಬಗ್ಗೆ ಎಷ್ಟು ಬರೆದರೂ ಬರೆದು ಮುಗಿಯುವುದಿಲ್ಲ! ಅವರ ಹುಟ್ಟಿದ ಹಬ್ಬವು ಇಂದು ರಾಷ್ಟ್ರೀಯ ಯುವ ದಿನ. ಅದಕ್ಕೆ ಪೂರಕವಾಗಿ ಅವರ ಒಂದಿಷ್ಟು (ನನಗೆ ಇಷ್ಟವಾದ) ಅರ್ಥಪೂರ್ಣ ಕೊಟೇಶನ್ ಇಲ್ಲಿ ಸಂಗ್ರಹಿಸಿ ಕೊಡುತ್ತಿರುವೆ. ಅವುಗಳಲ್ಲಿ ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿದರೆ ನಮ್ಮ ಬದುಕು ಅದ್ಭುತ ಆಗಬಲ್ಲದು.
೧) ಮಹತ್ಕಾರ್ಯವು ಕೇವಲ ಬಲಿದಾನಗಳಿಂದ ಮಾತ್ರ ಸಾಧ್ಯ ಆಗುತ್ತದೆ.
೨) ಶಕ್ತಿಯೇ ಜೀವನ. ದೌರ್ಬಲ್ಯವೇ ಮರಣ.
ವಿಕಸನವೇ ಜೀವನ. ಸಂಕುಚಿತ ಚಿಂತನೆಯೇ ಮರಣ. ಪ್ರೀತಿಯೇ ಜೀವನ. ದ್ವೇಷವೇ ಮರಣ.
೩) ಪ್ರತೀ ದಿನ ನಿನ್ನೊಳಗೆ ಒಮ್ಮೆಯಾದರೂ ಮಾತಾಡದಿದ್ದರೆ ನೀನು ಒಬ್ಬ ಅದ್ಭುತ ಗೆಳೆಯನನ್ನು ಕಳೆದುಕೊಳ್ಳುವೆ.
೪) ಹಳೆಯ ಧರ್ಮದ ಪ್ರಕಾರ ದೇವರನ್ನು ನಂಬದವ ನಾಸ್ತಿಕ. ಆಧುನಿಕ ಧರ್ಮದ ಪ್ರಕಾರ ತನ್ನ ಮೇಲೆ ನಂಬಿಕೆ ಇಲ್ಲದವನು ನಾಸ್ತಿಕ.
೫) ನಿನ್ನ ಜೀವನದಲ್ಲಿ ಒಂದು ದಿನ ಯಾವುದೇ ಸಮಸ್ಯೆ ಬಂದಿಲ್ಲ ಎಂದಾದರೆ ನೀನು ತಪ್ಪು ದಾರಿಯಲ್ಲಿ ನಡೆಯುತ್ತಿರುವೆ ಎಂದರ್ಥ.
೬) ಹೃದಯ ಮತ್ತು ಮೆದುಳು ಇವುಗಳಲ್ಲಿ ನೀನು ಒಂದನ್ನು ಆರಿಸುವ ಪ್ರಸಂಗ ಬಂತು ಅಂದರೆ ಖಂಡಿತವಾಗಿಯೂ ಹೃದಯವನ್ನು ಅನುಸರಿಸು.
೭) ನಾವು ನಮ್ಮ ಚಿಂತನೆಗಳ ಮೊತ್ತವೇ ಆಗಿದ್ದೇವೆ.
೮) ನೀನು ನಿನ್ನನ್ನು ನಂಬದ ಹೊರತು ದೇವರನ್ನು ನಂಬಲು ಸಾಧ್ಯವೇ ಇಲ್ಲ.
೯) ನಿನ್ನ ಆತ್ಮಕ್ಕಿಂತ ಉತ್ತಮ ಶಿಕ್ಷಕ ಇಲ್ಲ.
೧೦) ಪ್ರೀತಿಯಲ್ಲಿ ಹೆದರಿಕೆ ಇರುವುದಿಲ್ಲ. ಭಯ ಇದ್ದರೆ ಅದು ಪ್ರೀತಿಯೇ ಅಲ್ಲ.
೧೧) ನಿನಗೆ ಮರ್ಯಾದೆ ಸಿಗದ ಕಡೆ ನಿನ್ನ ಹಳೆಯ ಚಪ್ಪಲಿ ಕೂಡ ಬಿಡಬೇಡ.
೧೨) ಒಬ್ಬ ಪರಿಪೂರ್ಣ ನಿಸ್ವಾರ್ಥಿ ವ್ಯಕ್ತಿ ಜೀವನದಲ್ಲಿ ಅತ್ಯಂತ ಯಶಸ್ವೀ ವ್ಯಕ್ತಿ ಆಗಿರುತ್ತಾನೆ.
೧೩) ನೀನು ಸತ್ಯವನ್ನು ಸಾವಿರ ಸಾವಿರ ರೀತಿಯಿಂದ ಹೇಳಬಹುದು. ಆದರೆ ಅವೆಲ್ಲವೂ ಸತ್ಯವೇ ಆಗಿರುತ್ತದೆ.
೧೪) ನೀನು ಬೇರೆಯವರನ್ನು ಲೀಡ್ ಮಾಡುವಾಗ ಸೇವಕನಾಗಿ ಇರು. ನಿಸ್ವಾರ್ಥ ಮತ್ತು ತಾಳ್ಮೆ ನಿನ್ನ ವಿಜಯದ ಮೆಟ್ಟಿಲುಗಳು.
ವಿವೇಕಾನಂದರ ತತ್ವಗಳು ನಮ್ಮಲ್ಲಿ ಹೊಸ ಹುರುಪನ್ನು ತುಂಬಲಿ.

Leave a Reply

Your email address will not be published.