ಜಗತ್ತಿನ ಎರಡನೇ ಬಹುಮೂಲ್ಯ ಕ್ರಿಕೆಟರ್ ಸರ್ ರವೀಂದ್ರ ಜಡೇಜಾ.

ಕ್ರಿಕೆಟ್ ಜಗತ್ತಿನ ಬೈಬಲ್ ಎಂದೇ ಕರೆಯಲ್ಪಡುತ್ತಿರುವ WISDON ಪತ್ರಿಕೆಯು 21ನೆಯ ಶತಮಾನದ ಬಹುಮೂಲ್ಯ ಕ್ರಿಕೆಟರಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಅದರಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನ ಪಡೆದರೆ ಭಾರತದ ಸರ್ ರವೀಂದ್ರ ಜಡೇಜಾ (ಜಡ್ಡು) ಎರಡನೇ ಸ್ಥಾನ ಪಡೆದಿದ್ದಾನೆ! ಭಾರತದ ಈ ಆಲ್ರೌಂಡರ್ ಕ್ರಿಕೆಟರ್ 97.3 ಸ್ಕೋರ್ ಪಡೆದಿದ್ದು ಮುತ್ತಯ್ಯ ಮುರಳೀಧರನ್ ಅವರಿಂದ ಕೂದಲೆಳೆಯ ಅಂತರದಲ್ಲಿ ಹಿಂದೆ ಇದ್ದಾನೆ. ಅವನ ಆಯ್ಕೆಗೆ ಪತ್ರಿಕೆ ಕೊಟ್ಟ ಕಾರಣ ಇದು.
” ಅವನ ಬೌಲಿಂಗ್ ಸರಾಸರಿ ಶೇನ್ ವಾರ್ನ್ ಅವರಿಗಿಂತ ಉತ್ತಮ ಇದೆ ಮತ್ತು ಬ್ಯಾಟಿಂಗ್ ಸರಾಸರಿ ಶೇನ್ ವಾಟ್ಸನ್ ಅವರಿಗಿಂತ ಉತ್ತಮ ಇದೆ!” ಈ ಆಯ್ಕೆ ನನಗಂತೂ ಅಚ್ಚರಿ ತಂದಿಲ್ಲ!
ಅಂತಹ ವಿಶ್ವ ಕೀರ್ತಿ ಪಡೆದ ಜಡ್ಡು ಬದುಕು ತುಂಬಾ ಹೋರಾಟಗಳಿಂದ ಕೂಡಿತ್ತು. ಅವನ ತಂದೆ ಒಬ್ಬ ಸೆಕ್ಯುರಿಟಿ ಗಾರ್ಡ್. ತಾಯಿ ಸರಕಾರಿ ಆಸ್ಪತ್ರೆಯ ನರ್ಸ್. ಅಪ್ಪನಿಗೆ ಕ್ರಿಕೆಟ್ ಅಂದರೆ ಅಲರ್ಜಿ! ಅವರ ಪ್ರಕಾರ ಅದೊಂದು ಟೈಮ್ ವೇಸ್ಟ್ ಕ್ರೀಡೆ! ಮಗನನ್ನು ಸೈನ್ಯಕ್ಕೆ ಸೇರಿಸಬೇಕು ಎಂಬ ಕನಸು. ಆದರೆ ಜಡ್ಡು ಕ್ರಿಕೆಟನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದನು. ಕ್ರಿಕೆಟ್ ಇದ್ದರೆ ಊಟ, ತಿಂಡಿ, ನಿದ್ದೆ ಎಲ್ಲವೂ ಮರೆತು ಹೋಗುತ್ತಿತ್ತು. ಒಂದು ಸಾಮಾನ್ಯ ಕಂಪೆನಿಯ ಬ್ಯಾಟ್ ತೆಗೆದುಕೊಳ್ಳಲು ಅವನ ಹತ್ತಿರ ದುಡ್ಡು ಇರಲಿಲ್ಲ! ಅವನ ಭಾವನೆಗಳು ಅರ್ಥವಾಗುವುದು ಅಮ್ಮನಿಗೆ ಮಾತ್ರ. ಆದರೆ ಅವನ 17ನೆಯ ವರ್ಷ ಪ್ರಾಯದಲ್ಲಿ ಅಮ್ಮ ಅಪಘಾತದಲ್ಲಿ ತೀರಿ ಹೋದಾಗ ಹುಡುಗ ಎಲ್ಲಾ ಭರವಸೆ ಕಳೆದುಕೊಂಡ. ಮಹಾ ಮೌನಿಯಾದ. ಕೊನೆಗೆ ಅಪ್ಪನ ಮಾತಿಗೆ ಬೆಲೆ ಕೊಟ್ಟು ಸೇನಾ ಆಯ್ಕೆಗೆ ಸಿದ್ಧತೆ ಮಾಡಿಕೊಂಡ. ಆಗ ಅವನ ಜೀವನದ ತಿರುವು ಬಂದೇ ಬಿಟ್ಟಿತು.
ಒಂದು ದಿನ ಅವನ ಮನೆಗೆ ಬಂದಿದ್ದ ಮಹೇಂದ್ರ ಸಿಂಗ್ ಚೌಹಾಣ್ ಎಂಬ ಪೋಲಿಸ್ ಅಧಿಕಾರಿ ” ನಿಮ್ಮ ಮಗನ ಎತ್ತರ 5 ಅಡಿ 7 ಇಂಚು ಇದೆ. ಸೇನೆಗೆ ಆಯ್ಕೆ ಕಷ್ಟ ಆಗಬಹುದು. ಅವನು ಕ್ರಿಕೆಟ್ ಅಂದರೆ ಜೀವ ಬಿಡುತ್ತಾನೆ. ಕ್ರಿಕೆಟ್ ಆಡಲು ಕಳಿಸಿ. ಅವನ ಕನಸಿನ ಪ್ರಕಾರ ಬೆಳೆಯಲಿ” ಎಂದರು. ಆಗ ಅಪ್ಪ ಆಗಲಿ ಎಂದರು. ಇದರಿಂದ ಜಡ್ಡು ಕನಸಿಗೆ ರೆಕ್ಕೆಗಳು ಮೂಡಿದವು. ಅವನನ್ನು ತಡೆಯುವ ಯಾವ ಶಕ್ತಿಯೂ ಮುಂದೆ ಇರಲಿಲ್ಲ.
ಭಾರತದ Under 19 ತಂಡದಲ್ಲಿ (2005ರ ವಿಶ್ವಕಪ್ ಪಂದ್ಯಗಳಲ್ಲಿ) ಅವನ ಪ್ರತಿಭೆ ಮೊದಲ ಬಾರಿ ಪ್ರಕಾಶನಕ್ಕೆ ಬಂದಿತು. ಆ ಸರಣಿಯಲ್ಲಿ ಜಡ್ಡು ಹತ್ತು ವಿಕೆಟ್ ಹಾರಿಸಿದ್ದ. ಭಾರತ ರನ್ನರ್ ಅಪ್ ಆಯಿತು.
ಮುಂದೆ 2008ರಲ್ಲಿ Under 19 ವಿಶ್ವಕಪ್ ಪಂದ್ಯದಲ್ಲಿ ಭಾರತದ ವೈಸ್ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ. ಕ್ಯಾಪ್ಟನ್ ಆಗಿದ್ದವನು ವಿರಾಟ್ ಕೊಹ್ಲಿ. ಆಗ ಭಾರತ ವಿಶ್ವಕಪ್ ಗೆದ್ದಿತ್ತು. ಜಡ್ಡು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ಕ್ಲಿಕ್ ಆದವು. ಜಡ್ಡು ಭಾರತೀಯ ತಂಡಕ್ಕೆ ಆಯ್ಕೆ ಆಗಿದ್ದ.
ದೇಶೀಯ ಕ್ರಿಕೆಟ್ಟಲ್ಲಿ ಕೂಡ ಜಡ್ಡು ಹೊಳೆಯುವ ನಕ್ಷತ್ರವೇ ಆಗಿದ್ದ. ಪ್ರಥಮ ದರ್ಜೆಯ ಪಂದ್ಯದಲ್ಲಿ ಮೂರು ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಜಡ್ಡು ಮಾತ್ರ! ಏಕದಿನ ಪಂದ್ಯದಲ್ಲಿ ಒಬ್ಬ ಆಟಗಾರನಿಗೆ ಇರಬೇಕಾದ ಅಗ್ರೆಶನ್, ವೇಗ ಮತ್ತು ನಿರಂತರತೆ ಎಲ್ಲವೂ ಅವನಲ್ಲಿತ್ತು. ಆದರೆ ಅವನಿಗೆ ಟೆಸ್ಟ್ ಪಂದ್ಯದಲ್ಲಿ ಆಡುವ ಆಸೆ. ಅದಕ್ಕೋಸ್ಕರ ಅವನು ಮತ್ತೆ ನಾಲ್ಕು ವರ್ಷಗಳ ಕಾಲ ಕಾಯಬೇಕಾಯಿತು! ಅದರ ಮಧ್ಯೆ ಭುಜದ ನೋವು ಕಾಡಿತು. ಆಯ್ಕೆ ಸಮಿತಿ ಅವನ ಬಗ್ಗೆ ಪೂರ್ವಗ್ರಹವನ್ನು ಹೊಂದಿತ್ತು.
“Select Jaddu” ಎಂದು ಇಡೀ ಭಾರತ ಕೂಗಿ ಹೇಳುತ್ತಿದ್ದರೂ ಅವನ ಬಗ್ಗೆ ತಾತ್ಸಾರ ಮತ್ತು ನಿರ್ಲಕ್ಷ್ಯಗಳು ಸತತವಾಗಿ ಮುಂದುವರೆದವು. ಆದರೆ ಅದ್ಯಾವುದಕ್ಕೂ ತಲೆ ಬಿಸಿ ಮಾಡದೆ ಜಡ್ಡು ತನ್ನಷ್ಟಕ್ಕೆ ತಾನು ಕ್ರಿಕೆಟ್ ಆಡಿಕೊಂಡಿದ್ದ. ಎಂತಹಾ ಕಠಿಣ ಪಿಚ್ಚಿನಲ್ಲಿ ಕೂಡ ಜಡ್ಡು ವಿಕೆಟ್ ಪಡೆದು ಪಂದ್ಯಕ್ಕೆ ಬೇಕಾದ ತಿರುವು ಒದಗಿಸುತ್ತಿದ್ದ. ಅವನ Economy rate ಕೂಡ ಅತ್ಯುತ್ತಮ ಆಗಿತ್ತು. ಡೆತ್ ಓವರ್ಸಲ್ಲಿ ಧೋನಿ ಮತ್ತು ಜಡೇಜಾ ನಿಂತು ಸ್ಫೋಟಕ ಇನ್ನಿಂಗ್ಸ್ ಮೂಲಕ ದೇಶವನ್ನು ಗೆಲ್ಲಿಸಿದ ನಿದರ್ಶನಗಳು ಬಹಳ ಇವೆ. Never accepting defeat is his mindset! 2019ರ ವಿಶ್ವಕಪ್ ಸೆಮಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಟಾಪ್ ಆರ್ಡರ್ ಆಟಗಾರರೆಲ್ಲ ವಿಕೆಟ್ ಚೆಲ್ಲಿ ಹಿಂದೆ ಬಂದಾಗ ಜಡ್ಡು ಆಡಿದ ಇನ್ನಿಂಗ್ಸ್ ಅದು ಅದ್ಭುತ! ಕೇವಲ 59 ಎಸೆತಗಳಲ್ಲಿ 79 ರನ್ ಚಚ್ಚಿದ ಜಡ್ಡು ಅಮೋಘ ಹೋರಾಟ ಅದು ಯಾವಾಗಲೂ ಸ್ಮರಣೀಯ! ಇಂಥ ಎಷ್ಟೋ ಮ್ಯಾಚ್ ವಿನ್ನಿಂಗ್ ಆಟವನ್ನು ಜಡ್ಡು ಆಡಿದ್ದು ಭಾರತೀಯರಿಗೆ ಮರೆತು ಹೋಗುವುದಿಲ್ಲ. ಟ್ರೋಲಿಗರು ಎಷ್ಟು ಅವನನ್ನು ಅಪಮಾನ ಮಾಡಿದರೂ ಜಡ್ಡು ತನ್ನ ಫೋಕಸನ್ನು ಕಳೆದುಕೊಳ್ಳುವುದಿಲ್ಲ!
ಫೀಲ್ಡಿಂಗ್ ವಿಷಯಕ್ಕೆ ಬಂದರೆ ಅವನು ಭಾರತದ ‘ಬೆಸ್ಟ್ ಫೀಲ್ಡರ್’ ಎಂದೇ ಹೆಸರು ಪಡೆದಿದ್ದಾನೆ. ಎಷ್ಟು ಕಷ್ಟದ ಕ್ಯಾಚ್ ಕೂಡ ಜಡ್ಡು ಕೈ ಚೆಲ್ಲಿದ ಉದಾಹರಣೆ ಇಲ್ಲ. ಬೌಂಡರಿ ಗೆರೆಯಿಂದ ನೇರವಾಗಿ ವಿಕೆಟ್ಟಿಗೆ ಥ್ರೋ ಮಾಡುವ ಶಕ್ತಿ ಅವನಿಗೆ ಇದೆ!
ಅವನ ದಾಖಲೆಗಳ ಮೇಲೆ ಒಂದಿಷ್ಟು ಕಣ್ಣು ಹಾಯಿಸಿದಾಗ ಅದ್ಭುತಗಳು ದೊರೆಯುತ್ತವೆ. 49 ಟೆಸ್ಟ್ ಪಂದ್ಯದಲ್ಲಿ ಒಂದು ಶತಕ, 14 ಅರ್ಧಶತಕ ಒಳಗೊಂಡ 2296 ರನ್ನು ಅವನ ಬ್ಯಾಟ್ ಮೂಲಕ ಹರಿದು ಬಂದಿವೆ. ಗಳಿಸಿದ ವಿಕೆಟ್ಟುಗಳು 213.
ಏಕದಿನ ಪಂದ್ಯಗಳಿಗೆ ಬಂದರೆ 165 ಪಂದ್ಯಗಳಲ್ಲಿ 2296ರನ್, 187 ವಿಕೆಟ್ ಅವನ ಕ್ರೆಡಿಟ್ಟು. ಐಪಿಎಲ್ ಪಂದ್ಯಗಳಲ್ಲಿ CSK ಪರವಾಗಿ ಆಡುವ ಜಡ್ಡು ಕಪ್ತಾನ ಧೋನಿಯ ಮೋಸ್ಟ್ ಫೇವರೀಟ್ ಆಟಗಾರ. ಸಾಲು ಸಾಲು ಟ್ರೋಫಿ ಗೆಲ್ಲುವುದರಲ್ಲಿ ಜಡ್ಡು ಪಾತ್ರ ಬಹಳ ದೊಡ್ಡದು.
ಐಸಿಸಿ ಏಕದಿನ Ranking ಪಟ್ಟಿಯಲ್ಲಿ ಬೌಲಿಂಗಲ್ಲಿ ಮೊದಲ ಸ್ಥಾನಕ್ಕೆ ಏರಿದ ಕೇವಲ ಎರಡನೆಯ ಭಾರತೀಯ ಬೌಲರ್ ಜಡ್ಡು! ಅವನೀಗ ಭಾರತದ ಮಹೋನ್ನತ ಸವ್ಯಸಾಚಿ ಆಟಗಾರನಾಗಿ ಬೆಳೆಯುತ್ತಿರುವುದು ಸತ್ಯ! 31 ವರ್ಷದ ಜಡ್ಡು ಇನ್ನೂ ಹಲವು ವರ್ಷ ಭಾರತವನ್ನು ಪ್ರತಿನಿಧಿಸುವ ಶಕ್ತಿ ಮತ್ತು ಪ್ರತಿಭೆ ಹೊಂದಿದ್ದಾನೆ. ನಾವು ಅವನಿಂದ ಇನ್ನಷ್ಟು ಹೋರಾಟದ ಇನ್ನಿಂಗ್ಸ್ ನಿರೀಕ್ಷೆ ಮಾಡಬಹುದು.
ಗುಜರಾತಿನ ರಾಜಕೋಟಲ್ಲಿ ‘ ಜಡ್ಡು ಫುಡ್ ಫೀಲ್ಡ್ ರೆಸ್ಟಾರೆಂಟ್ ‘ ನಿರ್ಮಿಸಿ ಅದನ್ನು ಒಂದು ಸುಂದರವಾದ ಮ್ಯೂಸಿಯಂ ಆಗಿ ಮಾಡಿದ್ದಾನೆ. ಅವನದ್ದೇ ಅದ ಫಾರ್ಮ್ ಹೌಸ್, ಕುದುರೆಗಳ ಲಾಯ ಕೂಡ ಅವನು ಹೊಂದಿದ್ದಾನೆ. ಬಿಡುವಿದ್ದಾಗ ಕುದುರೆ ಸವಾರಿ, ಫಾರ್ಮಿಂಗ್ ಕೆಲಸ, ಪುಸ್ತಕ ಓದುವುದು ಅವನ ಪ್ರೀತಿಯ ಹವ್ಯಾಸಗಳು.
🙏ಉತ್ತಮ ಬ್ಯಾಟ್ ಖರೀದಿಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ದ ಜಡ್ಡು ಇಂದು ತನ್ನ ಕನಸಿನ ಸಾಮ್ರಾಜ್ಯವನ್ನು ತನಗೆ ಬೇಕಾದ ಹಾಗೆ ಕಟ್ಟಿದ್ದು ಅಚ್ಚರಿ ಅಲ್ಲವೇ?
☑ ರಾಜೇಂದ್ರ ಭಟ್ ಕೆ.

Leave a Reply

Your email address will not be published.