ಬಂಟರು ಆರ್ಥಿಕವಾಗಿ ಬಲಿಷ್ಟರಾಗುತ್ತಿದ್ದಂತೆ ತಮ್ಮ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಯಾಕೋ ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಿಯೂ ನಮಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿ ಅಸಡ್ಡೆ. ವೈದಿಕ ಸಂಪ್ರದಾಯವೇ ಶ್ರೇಷ್ಟ ಎಂಬ ಭಾವನೆ. ಇದಕ್ಕೆ ಸರಿಯಾಗಿ ತೌಳವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ. ನಮ್ಮ ಭೂತಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವ ನಮಗೆ ವಿವಾಹವೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ, ಸಪ್ತಪದಿ, ಕನ್ಯಾದಾನ ಮಾಂಗಲ್ಯಧಾರಣೆ ಇದ್ದರೇನೆ ಅದು ಮದುವೆ. ಸಧ್ಯಕ್ಕೆ ವರಪೂಜೆ. ಕಾಶೀಯಾತ್ರೆ, ಉರುಟಣೆ ಇತ್ಯಾದಿಗಳು ಪ್ರಾಂಭವಾಗಿಲ್ಲ. ಕ್ರಮೇಣ ಪ್ರಾರಂಭವಾಗಲೂ ಬಹುದು.
ಬಂಟರು ಮೂಲತಃ ಕ್ಷತ್ರಿಯರು ಹಾಗೂ ಕೃಷಿಯನ್ನು ನಂಬಿ ಬದುಕಿದವರು. ನಮ್ಮಲ್ಲಿ ಭೂಮಿಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದೇ ಸಂಪ್ರದಾಯ. ಹಿಂದೆ ಅಂದರೆ ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಹಿಂದೆ ಮಾಂಗಲ್ಯಧಾರಣೆಯೂ ನಮ್ಮಲ್ಲಿ ಇರಲಿಲ್ಲವಂತೆ. ವಧುವನ್ನು ಅಲಂಕರಿಸುವಾಗ ಮುತ್ತೈದೆಯರೇ ಅವಳ ಕೊರಳಿಗೆ ಕರಿಮಣಿ ಕಟ್ಟಿ, ಕಾಲುಂಗುರ ತೊಡಿಸುತ್ತಿದ್ದರಂತೆ.
“ಕನ್ಯಾದಾನ” ನಮ್ಮ ಪಾಲಿಗೆ ಒಂದು ಅರ್ಥಹೀನ ಸಂಪ್ರದಾಯ. ಬಂಟರು ಮಾತೃಪ್ರಧಾನ ಪದ್ದತಿಯನ್ನು ನಂಬುವವರು. ನಮ್ಮಲ್ಲಿ “ಕೊಟ್ಟ ಹೆಣ್ಣು ಕುಲದಿಂದ ಹೊರಗೆ” ಅನ್ನುವ ಕ್ರಮ ಇಲ್ಲ. ಹೆಣ್ಣಿಗೆ “ಅಮೆಸೂತಕ” ತಾಯಿ ಮನೆಯದೇ ಹೊರತು ಗಂಡನ ಮನೆಯದಲ್ಲ. ಗಂಡನ ಮರಣ ಸಂಭವಿಸಿದರೆ ಅವಳಿಗೆ ಆಶ್ರಯ ತಾಯಿ ಮನೆ. ಅವಳು ವೈದಿಕರ ಹೆಂಗಸರಂತೆ ತಲೆ ಬೋಳಿಸಿ ಗಂಡನ ಮನೆಯಲ್ಲಿ ಕೂಲಿಯಾಳಿಗಿಂತ ಕಡೆಯಾಗಿ ಬದುಕಬೇಕಾಗಿಲ್ಲ. ಹಾಗಿರುವಾಗ ಕನ್ಯಾದಾನ ಎಲ್ಲಿ ಬಂತು? ತಾಯಿಮನೆಯಲ್ಲಿ ಗೌರವದ ಬದುಕು ಅವಳದು. ಸಪ್ತಪದಿಯೂ ನಮ್ಮ ಪದ್ದತಿಯಲ್ಲ, ಅಕ್ಕಿ ಹಾಗೂ ನಾಣ್ಯದ ಮೇಲೆ ಪಾದವೂರಿ ನಡೆಸುವ ಸಪ್ತಪದಿಯ ಔಚಿತ್ಯ ನನಗೆ ಅರ್ಥವಾಗಿಲ್ಲ. ಕೃಷಿಕರಾದ ನಾವು ಅನ್ನ(ಅಕ್ಕಿ) ವನ್ನು ಹಾಗೂ ಲಕ್ಷ್ಮಿಯನ್ನು ಕಾಲಿನಿಂದ ಮೆಟ್ಟಬಹುದೇ? ವೈದಿಕರು ಹೇಳುತ್ತಾರೆ, ಆದುದರಿಂದ ಮೆಟ್ಟಬಹುದೋ ಏನೋ?
ನಮ್ಮದು ಒಂದು ರೀತಿಯ ಎಡೆಬಿಡಂಗಿತನದ ಬದುಕು. ಅತ್ತ ವೈದಿಕವೂ ಅಲ್ಲದ ಇತ್ತ ತೌಳವವೂ ಅಲ್ಲದ ಕಲಸುಮೇಲೋಗರ. ವೈದಿಕ ರೀತಿಯಲ್ಲಿ ವಿವಾಹವಾದ ಬಳಿಕ ಬಂಟರ ಪದ್ದತಿಯ ತೊಡಮನೆ ಎಂಬ ಸಂಪ್ರದಾಯವೂ ಇದೆ. ಉತ್ತರಕ್ರಿಯೆ ಮಾಡಿ ಮೃತರನ್ನು ವೈಕುಂಟಕ್ಕೆ ಕಳುಹಿಸಿದ ಬಳಿಕ ತಿಂದು ಕುಡಿದು “ಉಲಾಯಿ ಲೆಪ್ಪುನ” ಕಾರ್ಯಕ್ರಮವೂ ಇದೆ. ಮೃತರು ವೈಕುಂಟ ಸೇರಬೇಕೋ ಅಥವಾ ಸತ್ತ ನಮ್ಮ “ಪದಿನಾಜಿ” ಹಿರಿಯರೊಂದಿಗೆ ನಮ್ಮ ಮನೆಯೊಳಗೆ ಇರಬೇಕೇ ಎನ್ನುವುದನ್ನು ತೀರ್ಮಾನಿಸಲಾಗದ ಅಯೋಮಯ ಸ್ಥಿತಿ ನಮ್ಮದು.
ಇತ್ತೀಚೆಗೆ ಬಂಟರಲ್ಲಿಯೂ ಕೊಂಕಣಿಗರಲ್ಲಿ ಬ್ರಾಹ್ಮಣರಲ್ಲಿ ಇರುವಂತೆ ಒಬ್ಬ ಗುರು ಬೇಕೆಂಬ ಕೇಳಿಕೆಯೂ ಇದೆ. ಇಬ್ಬರು ಗುರುಗಳು ತಾವೇ ಬಂಟರ ಗುರುಗಳೆಂದು ಬಿಂಬಿಸಲು ಪ್ರಯತ್ನಿಸಿದ್ದೂ ಗುಟ್ಟಾಗಿ ಉಳಿದಿಲ್ಲ. ನಿಮ್ಮ ಮನೆಯ ದೈವಗಳನ್ನು, ನಾಗನನ್ನು ನನ್ನಲ್ಲಿ ತಂದು ಇಡಿ, ನಿಮಗೆ ಪುರುಸೊತ್ತು ಇಲ್ಲದಿದ್ದರೆ ನಾನೇ ಪೂಜೆ ಮಾಡುತ್ತೇನೆ ಅಂತ ಪೂಜೆಯನ್ನೂ outsource ಗೆ ಗುತ್ತಿಗೆ ಪಡೆಯಲು ಒಬ್ಬ ಗುರು ಪ್ರಯತ್ನಿಸುತ್ತಿದ್ದನೆಂದು ಕೇಳಿದ ನೆನಪು. ಆತ ಇತ್ತೀಚೆಗೆ ಕಾಮುಕತೆಯ ಕೆಸರು ಸುಳಿಯಲ್ಲಿ ಸಿಲುಕಿ ರೇಸ್ ನಿಂದ out ಆದ ಹಾಗೆ ಕಾಣಿಸುತ್ತದೆ.
ಅಂತೂ ಬಂಟರು ಮೊದಲು ವೈದಿಕರಿಂದ ಶೋಷಿಸಲ್ಪಡುತ್ತಿದ್ದರೆ ಈಗ ನಮ್ಮವರಿಂದಲೂ ಶೋಷಿಸಲ್ಪಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲರದೂ ಹಣ ಮಾಡುವದೇ ಉದ್ದೇಶವೇ ಹೊರತು ಜಾತಿಯ ಕಟ್ಟುಪಾಡುಗಳನ್ನು ಉಳಿಸಿ ಒಗ್ಗಟ್ಟು ಕಾಪಾಡುವುದು ಅಲ್ಲ.

Leave a Reply

Your email address will not be published.