ಮಂಗಳೂರು:”ಕುಳಾಯಿ ಫೌಂಡೇಶನ್” ನಿಂದ ಬಡಮಕ್ಕಳ ದತ್ತು ಸ್ವೀಕಾರ

ಮಂಗಳೂರು: ಸ್ತ್ರೀ ಸಬಲೀಕರಣ, ಬಡಮಕ್ಕಳ ಶಿಕ್ಷಣ ಹಾಗೂ ಸರಕಾರಿ ಶಾಲೆಗಳ ಅಭಿವೃದ್ಧಿ ಧ್ಯೇಯವನ್ನಿಟ್ಟುಕೊಂಡು ಸ್ಥಾಪಿಸಿರುವ “ಕುಳಾಯಿ ಫೌಂಡೇಶನ್” ಈ ಶೈಕ್ಷಣಿಕ ವರ್ಷದಲ್ಲಿ ಸುಮಾರು 250 ಮಂದಿ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚು ವೆಚ್ಚ ನಿಭಾಯಿಸುವ ಜೊತೆಗೆ ಅವರನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದತ್ತು ಪಡೆಯುವ ಯೋಜನೆ ಹಾಕಿಕೊಂಡಿದೆ ಎಂದು ಫೌಂಡೇಶನ್ ಸ್ಥಾಪಕಿ ಪ್ರತಿಭಾ ಕುಳಾಯಿ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಾಲಿಸಿಕೊಂಡು ಮುನ್ನಡೆಯುತ್ತಿರುವ ಫೌಂಡೇಶನ್ ಮೂಲಕ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು ಮಾತ್ರವಲ್ಲದೆ ಅವರ ಮುಂದಿನ ಉದ್ಯೋಗ ಭದ್ರತೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

2019ರಲ್ಲಿ ಸ್ಥಾಪನೆಯಾಗಿರುವ ಕುಳಾಯಿ ಫೌಂಡೇಶನ್ ಈಗಾಗಲೇ 131 ಮಂದಿ ಬಡಮಕ್ಕಳ ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದೆ. ಕಳೆದ ಎರಡು ವರ್ಷಗಳ ಕೊರೋನಾ ಹಾವಳಿ, ಲಾಕ್ ಡೌನ್ ಸಂದರ್ಭದಲ್ಲಿ ಮಂಗಳೂರಿನ ಹಂಪನಕಟ್ಟೆಯಲ್ಲಿ ಪ್ರತಿನಿತ್ಯ 250 ಮಂದಿ ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಊಟ ನೀಡಿದ್ದಲ್ಲದೆ ಕಿಟ್ ಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದೆ.

ಕುಳಾಯಿ ಫೌಂಡೇಶನ್ ವತಿಯಿಂದ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳನ್ನು ದತ್ತು ಪಡೆದು ಆಂಗ್ಲಮಾಧ್ಯಮ ಕಲಿಕೆಗೆ ಒತ್ತು ನೀಡುವ ಕಾರ್ಯಕ್ರಮ ರೂಪಿಸಲಾಗುವುದು ಅಲ್ಲದೆ ಸರಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಪ್ರಾರಂಭವಾಗಿದ್ದು ಫೀಸ್ ಕಟ್ಟಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ತಕ್ಷಣವೇ ಫೀಸ್ ಕಟ್ಟಲು ಆರ್ಥಿಕವಾಗಿ ಸಹಾಯ ಮಾಡಲಾಗುವುದು, ಮುಖ್ಯವಾಗಿ ಪಿಯು, ಪದವಿ, ಡಿಪ್ಲೋಮ, ಐಟಿಐ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು ಅಥವಾ ಫೋನ್ ನಂಬರ್ ಸಂಪರ್ಕಿಸಲು ಕೋರಿದ್ದಾರೆ.

ಪ್ರತಿಭಾ ಕುಳಾಯಿ

ಕುಳಾಯಿ ಫೌಂಡೇಶನ್

ವಿ.ಟಿ. ರೋಡ್*

ಕುಳಾಯಿ ಮಂಗಳೂರು

575019

ಮೊಬೈಲ್ ಸಂಖ್ಯೆ : 9964756410

Leave a Reply

Your email address will not be published.