ಸುಳ್ಯ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಡಪ್ಪಾಡಿ ಗ್ರಾಮ ಪಂಚಾಯತ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಅಭಿಯಾನಕ್ಕೆ ಡಿ.5 ರಂದು ಚಾಲನೆ ನೀಡಲಾಯಿತು. ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಪ್ರೊಬೇಷನರಿ ಐಎಎಸ್ ಅಧಿಕಾರಿ ಮೋನಾ ರೋತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ನಮ್ಮ ಭೂಮಿಯನ್ನು ಉಳಿಸಬೇಕಾಗಿದೆ. ಪ್ಲಾಸ್ಟಿಕ್ ಉಪಯೋಗವನ್ನು ಕಡಿಮೆ ಮಾಡುವ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಮೂಡಬೇಕು ಎಂದರು.
ಪ್ಲಾಸ್ಟಿಕ್ ಪಡೆದು ಅಕ್ಕಿ ನೀಡುವ ಮೂಲಕ ಮೋನಾ ರೋತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮಡಪ್ಪಾಡಿಯಲ್ಲಿ ಶೆ.100 ಶೌಚಾಲಯ ನಿರ್ಮಾಣ ಆಗಿದೆ.ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಸಾಧ್ಯವಿಲ್ಲದಿದ್ದರೂ ಉಪಯೋಗ ಸಾಧ್ಯವಾದಷ್ಟು ಕಡಿಮೆ ಮಾಡುವ ಮೂಲಕ ಮಾದರಿ ಗ್ರಾಮ ರೂಪಿಸಬೇಕು ಎಂದರು. ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್ ಗಳ ಬಳಕೆಗೆ ಕಡಿವಾಣ ಹಾಕಬೇಕು. ಪ್ಲಾಸ್ಟಿಕ್ ಬಳಕೆಯನ್ನು ಅತೀ ಕಡಿಮೆ ಉಪಯೋಗ ಮಾಡುವಂತೆ ಜಾಗೃತಿ ಮೂಡಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಸಿದ ಪ್ಲಾಸ್ಟಿಕ್
ಶುಚಿಗೊಳಿಸಿ ನೀಡಿದರೆ ಒಂದು ಕೆಜಿ ಪ್ಲಾಸ್ಟಿಕ್ ಗೆ 10 ಕೆಜಿ ಅಕ್ಕಿ ನೀಡುವ ಯೋಜನೆಯ ಬಗ್ಗೆ ಗ್ರಾಮದ ಎಲ್ಲರಿಗೂ ತಿಳಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಳಿಕ ಕೊರೋನಾ ಲಾಕ್ ಡೌನ್ ಕಾರಣ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಆರಂಭವಾಗಿರುವ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನ ಪ್ರತಿ ತಿಂಗಳು ಗ್ರಾಮ ಪಂಚಾಯತ್ ವತಿಯಿಂದ ಮುಂದುವರಿಲಿದೆ. ಪ್ಲಾಸ್ಟಿಕ್ ಖರೀದಿಗೆ ಬೇಕಾಗುವ ಅಕ್ಕಿಯನ್ನು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವುದು. ಮುಂದಿನ ದಿನಗಳಳಲ್ಲಿ ಇತರ ಪಂಚಾಯತಿಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಮಡಪ್ಪಾಡಿ ಗ್ರಾಮದ ಎಲ್ಲಾ ಅಭಿವೃದ್ಧಿಗೆ ಕಾರ್ಯನಿರತ ಪತ್ರಕರ್ತರ ಸಂಘದ ಪೂರ್ಣ ಸಹಕಾರ ಇದೆ ಎಂದು ಅವರು ಹೇಳಿದರು.
ಮಡಪ್ಪಾಡಿ ಗ್ರಾ.ಪಂ.ಆಡಳಿತಾಧಿಕಾರಿ ಸುರೇಶ್ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ,
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಕಾರ್ಯದರ್ಶಿ ಪದ್ಮನಾಭ ಮುಂಡೋಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಸಮಿತಿ ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ದುರ್ಗಾಕುಮಾರ್ ನಾಯರ್ ಕೆರೆ, ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ, ಮುರಳೀಧರ ಅಡ್ಡನಪಾರೆ, ದಯಾನಂದ ಕೊರತ್ತೋಡಿ, ಹಸೈನಾರ್ ಜಯನಗರ, ಜಗತ್ ದೇರಾಜೆ,ಮಧುಕೃಷ್ಣ ಸಹಕರಿಸಿದರು.
ಒಂದು ಕೆಜಿ ಪ್ಲಾಸ್ಟಿಕ್ ಗೆ 10. ಕೆಜಿ ಅಕ್ಕಿ:
ಒಂದು ಕೆ.ಜಿ ಪ್ಲಾಸ್ಟಿಕ್ ತರುವ ಗ್ರಾಮಸ್ಥರಿಗೆ 10 ಕೆ.ಜಿ.ಅಕ್ಕಿ, 500 ಗ್ರಾಂ. ಪ್ಲಾಸ್ಟಿಕ್ ಗೆ 5 ಕೆ.ಜಿ.ಅಕ್ಕಿ, 100 ಗ್ರಾಂ. ಪ್ಲಾಸ್ಟಿಕ್ ನೀಡಿದವರಿಗೆ 1 ಕೆ.ಜಿ. ಅಕ್ಕಿಯನ್ನು ನೀಡಲಾಗುವುದು. ಸಾಂಕೇತಿಕವಾಗಿ ಪ್ಲಾಸ್ಟಿಕ್ ಪಡೆದು ಅಕ್ಕಿ ನೀಡಲಾಯಿತು.
Leave a Reply