ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು.? ಆದ್ರೇ ಕಾಲೇಜುಗಳಿಗೆ ರಜೆ ಯಾಕೆ.? ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ? – ಡಿಕೆಶಿ ಕಿಡಿ

ಬೆಂಗಳೂರು: ಪ್ರಧಾನಿ ಮೋದಿ ( PM Narendra Modi ) ಹಾದು ಹೋಗುವ ಮಾರ್ಗದಲ್ಲಿ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೋದಿ ಬಂದು ಹೋಗಲಿ ಬೇಡ ಅಂದವರ್ಯಾರು. ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು. ಆದರೆ, ಕಾಲೇಜುಗಳಿಗೆ ರಜೆ ಕೊಡುತ್ತಿರುವುದು ಯಾಕೆ ?

ವಿದ್ಯಾರ್ಥಿಗಳು ಏನು ಟೆರರಿಸ್ಟ್ ಗಳಾ ? ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( KPCC President DK Shivakumar ) ಅವರು, ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿಕೊಂಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಟ್ವೀಟ್ ನ್ನಷ್ಟೇ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಹೆದರಿಕೊಳ್ಳದೆ ಧ್ವನಿ ಎತ್ತಬೇಕು. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಂಕರಾಚಾರ್ಯ ಎಲ್ಲರ ಬಗ್ಗೆಯೂ ಪಠ್ಯದಲ್ಲಿ ಅವಮಾನ ಆಗಿದೆ. ಕೆಲವು ಸ್ವಾಮೀಜಿಗಳು ಟ್ವೀಟ್ ಮಾಡಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಆದರೆ ಇನ್ನಷ್ಟು ಸ್ವಾಮೀಜಿಗಳು ಧ್ವನಿ ಎತ್ತಬೇಕು. ಸ್ವಾಮೀಜಿಗಳು ರಾಜಕಾರಣಕ್ಕೆ ಬೆಂಬಲ ಕೊಡುವುದು ಬೇಡ. ಸ್ವಾಮೀಜಿಗಳಿರುವುದು ಸಂಸ್ಕೃತಿ, ನ್ಯಾಯ ಉಳಿಸಲು ಸರ್ಕಾರಕ್ಕೆ ಹೆದರಿಕೊಂಡು ಸುಮ್ಮನಿರಿವುದು ಬೇಡ. ಅವರೇ ಧ್ವನಿ ಎತ್ತದಿದ್ದರೆ ಯಾರು ಎತ್ತಬೇಕು? ಎಂದರು.

ಇದು ಒಂದು ಜಾತಿ ಧರ್ಮದ ವಿಚಾರವಲ್ಲ. ಎಲ್ಲರೂ ಕೂಡ ಒಗ್ಗಟ್ಟು ಪ್ರದರ್ಶಿಸಬೇಕು. ಶಾಂತಿ ಭಂಗ ಮಾಡುವ ಕೆಲಸ ಸರ್ಕಾರ ಮಾಡ್ತಿದೆ. ಅವಮಾನವಾದಾಗ ಒಕ್ಕಲಿಗರ ಸಂಘ ಯಾಕೆ ಮಾತಾಡ್ತಿಲ್ಲ? ಬೇರೆ ಸಂಘಟನೆಗಳು ಯಾಕೆ ಮಾತಾಡ್ತಿಲ್ಲ? ಕೆಲ ಜನಪ್ರತಿನಿಧಿಗಳು ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡ್ತಿರಬಹುದು. ಆದರೆ ಇದರಲ್ಲಿ ಹಾಗೆ ಇರಬಾರದು ಎಂದರು.

ಮೋದಿ ಸಾಗುವ ಮಾರ್ಗದ ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ ? ರಸ್ತೆಯಲ್ಲಿ ಏನು ಭದ್ರತೆ ಕೊಡಬೇಕೋ ಕೊಡಲಿ. ರೋಡ್ ಶೋ ನಡೆಸಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ಎಂಬುದಾಗಿ ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.

ಡಿಕೆಶಿ ಹಿಂದು ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ. ಇದನ್ನ ಬೇಕಾದ್ರೆ ಬಂದು ನೋಡಲಿ. ನಾನು ಹಿಂದೂ ಧರ್ಮೀಯ. ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ಪಕ್ಷದಲ್ಲಿ ನಾವು ಯಾರಿಗೆ ಬೇಕಾದರೂ ಅಧಿಕಾರ ಕೊಡ್ತೇವೆ. ಇವರಿಗೆ ಏನಾಗಬೇಕು. ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ‌. ಸಂಘಟನೆಗಳ ಬಗ್ಗೆ ಭಯವಿದೆ ಎಂದರು.

ಅಗ್ನಿಪಥ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಇಷ್ಟು ವರ್ಷ ದೇಶವನ್ನು ಎಂಥೆಂತಹ ಸಂದರ್ಭಗಳಲ್ಲಿ ರಕ್ಷಣೆ ಮಾಡಿಲ್ಲಾ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿಪಥ್ ಯೋಜನೆಗೆ ಕಳುಹಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು. ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕಾ ? ಮೋದಿ ಬರುತ್ತಿರುವುದು ಜನಕ್ಕೆ ಅನುಕೂಲ ಮಾಡಿಕೊಡಲು ಅಲ್ಲಾ.? ಅವರ ಪಕ್ಷದ ನಾಯಕರ ಅನುಕೂಲಕ್ಕೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ೪೦% ಸರ್ಕಾರ ಅಂದಿದ್ದಕ್ಕೆ ಉತ್ತರ ಕೊಡಲಿ. ನಮ್ಮ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಲಿ ಎಂದರು.

Leave a Reply

Your email address will not be published.