ಯುಎಇ ‘ಗೋಲ್ಡನ್ ವೀಸಾ’ ಪಡೆದ ಬಂಟ್ವಾಳದ ಬಶೀರ್

ದುಬಾಯಿಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಆಗಿರುವ ಬಶೀರ್

ಬಂಟ್ವಾಳ, ನ.23: ಯುನೈಟೆಡ್ ಸ್ಟೇಟ್ಸ್ ಎಮಿರೇಟ್ಸ್ (ಯು.ಎ.ಇ.) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ ‘ಗೋಲ್ಡನ್ ವೀಸಾ’ ವನ್ನು ದುಬಾಯಿಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಬಂಟ್ವಾಳದ ಬಶೀರ್ ಮತ್ತು ಅವರ ಕುಟುಂಬಕ್ಕೆ ನೀಡಿದೆ.
ಕೊರೋನ ಸಂಧರ್ಭದಲ್ಲಿ ಯುಎಇ ಯಲ್ಲಿ ಮಾಡಿದ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರಕಾರವು ಬಶೀರ್ ಅವರಿಗೆ ಗೋಲ್ಡನ್ ವೀಸಾ ನೀಡುವ ಮೂಲಕ ಪುರಸ್ಕಾರಿಸಿದೆ.


ಬಂಟ್ವಾಳದ ಅಬೂಬಕ್ಕರ್ ಯಾನೆ ಅಬ್ಬೋನು ಎಂಬವರ ಪುತ್ರರಾಗಿರುವ ಬಶೀರ್ ಅವರು 27 ವರ್ಷಗಳಿಂದ ಯು.ಎ.ಇ.ಯಲ್ಲಿ ಸೇವೆಯಲ್ಲಿದ್ದಾರೆ. ‘ಗೋಲ್ಡನ್ ವೀಸಾವು ಯು.ಎ.ಇ.ಯಲ್ಲಿ ಹತ್ತು ವರ್ಷಗಳ ವಾಸ್ತವ್ಯಕ್ಕೆ ಅವಕಾಶ ನೀಡುವ ವೀಸಾ ಇದಾಗಿದ್ದು ಬಶೀರ್ ಮತ್ತು ಅವರ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಈ ಗೋಲ್ಡನ್ ವೀಸಾ’ ಲಭಿಸಿದೆ.
ಯು.ಎ.ಇ.ಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಅಧೀನದಲ್ಲಿ 8 ಆಸ್ಪತ್ರೆಗಳು, 150ರಷ್ಟು ಕ್ಲಿನಿಕ್ ಗಳು, 250 ರಷ್ಟು ಫಾರ್ಮಸಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಜನರಲ್ ಮೆನೇಜರ್ ಆಗಿ ಬಶೀರ್ ಬಂಟ್ವಾಳ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊರೋನ ಸಂದರ್ಭದಲ್ಲಿ ಬಶೀರ್ ಬಂಟ್ವಾಳ್ ನೇತೃತ್ವದಲ್ಲಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ವತಿಯಿಂದ ಯು.ಎ.ಇ.ಯಾದ್ಯಂತ ಮಾಡಿರುವ ಮಾನವೀಯ ಸೇವೆ ಅಲ್ಲಿನ ಸರಕಾರದ ಅಭಿನಂದನೆಗೆ ಪಾತ್ರವಾಗಿತ್ತು.

ಕೊರೋನ ನಿಯಂತ್ರಿಸಲು ಲಾಕ್ ಡೌನ್ ಹೇರಿದ್ದ ಸಂದರ್ಭದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ದಿನನಿತ್ಯ ಸಿದ್ಧ ಆಹಾರ, ಆಹಾರ ಸಾಮಗ್ರಿಗಳ ಕಿಟ್, ಆರೋಗ್ಯ ತಪಾಸಣೆ, ವಸತಿ ರಹಿತರಿಗೆ ವಸತಿ ವ್ಯವಸ್ಥೆ, ಊರಿಗೆ ಮರಳುವವರಿಗೆ ವಿವಿಧ ಸವಲತ್ತುಗಳನ್ನು ಬಶೀರ್ ಬಂಟ್ವಾಳ ನೇತೃತ್ವದಲ್ಲಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ಮಾಡಿತ್ತು. ಇದಕ್ಕಾಗಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ಅನ್ನು ಯು.ಎ.ಇ. ಸರಕಾರ ಪ್ರಮಾಣ ಪತ್ರ ನೀಡಿ ಗೌರವಿಸಿತ್ತು

ಬಂಟ್ವಾಳ ಕೆಳಗಿನ ಪೇಟೆಯ ನಿವಾಸಿ, ಸಾಮಾಜಿಕ ಕಾರ್ಯಕರ್ತ, ಕೊಡುಗೈದಾನಿ, ಅನಾಥ ಹಾಗೂ ನಿರ್ಗತಿಕರ ಸೇವೆಯಲ್ಲಿ ತೊಡಗಿಸಿಕೊಂಡ ಬಶೀರ್ ಬಂಟ್ವಾಳ ಇವರು
ಲಾಕ್ ಡೌನ್ ಸಂಧರ್ಭದಲ್ಲಿ ಅನಿವಾಸಿ ಭಾರತೀಯರು ಹೆಚ್ಚು ವಾಸಿಸುವ ಪ್ರದೇಶದಲ್ಲಿ ತನ್ನ ಜೀವದ ಹಂಗನ್ನು ತೊರೆದು ಭಾಷೆ ಜಾತಿ ಭೇದ ಮಾಡದೇ ವೈದ್ಯಕೀಯ ಚಿಕಿತ್ಸೆಗಳು ಆಹಾರ ಪದಾರ್ಥಗಳನ್ನು ವಿತರಿಸಿದರಲ್ಲದೇ ಕರ್ನಾಟಕ ಘನಸರಕಾರದ ಮಂತ್ರಿಗಳನ್ನು ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಮೂಲಕ ಸಂಪರ್ಕಿಸಿ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

ಇದೇ ಸಂದರ್ಭದಲ್ಲಿ ತನ್ನ ಸ್ವಂತ ಊರಾದ ಕೆಳಗಿನ ಪೇಟೆಯ ಜಮಾಅತ್ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿದ್ದ ಹಲವಾರು ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿದ್ದಾರೆ.

ಯು.ಎ.ಇ. ಸರಕಾರವು ಇವರ ಕುಟುಂಬಕ್ಕೆ ನೀಡಿದ ಈ ಗೌರವವು ಅವರ ಉದಾತ್ತ, ಮಾನವೀಯ ನಿಷ್ಕಲ್ಮಶ ಮನಸ್ಸಿಗೆ ಸಾಕ್ಷಿಯಾಗಿದೆ.

Leave a Reply

Your email address will not be published.