ಮಂಗಳೂರು: ‘ಅಗ್ನಿಪಥ್’ ನಿಂದ ಯುವಕರಿಗೆ ವಂಚನೆ; ಯುವ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು: ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ವಿರುದ್ಧ ಯುವ ಕಾಂಗ್ರೆಸ್ ವತಿಯಿಂದ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನೆ ನಡೆಯಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮಾತನಾಡಿ, ಕೇಂದ್ರ ಸರಕಾರದ ಅಗ್ನಿಪಥ್ ಯೋಜನೆ ಯುವಕರನ್ನು ಸೈನಿಕರನ್ನಾಗಿ ಮಾಡುವ ಯೋಜನೆ. ಆದರೆ, ಈ ಯೋಜನೆ ಮೂಲಕ ನಾಲ್ಕೇ ವರ್ಷದಲ್ಲಿ ನಿವೃತ್ತಿಗೊಳಿಸಿ ಮನೆಗೆ ಕಳಿಸೋದು ಸರಿಯಲ್ಲ. 80 ಸಾವಿರ ಸೈನಿಕರನ್ನು ತೆಗೆದುಕೊಳ್ಳುವ ಬದಲು ಈ ಯೋಜನೆಗೆ ಬರೀ 46 ಸಾವಿರ ಸೈನಿಕರನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಇವರಿಗೆ 15 ವರ್ಷ ಸೇವೆ ಬದಲು ಕೇವಲ 4 ವರ್ಷದ ಅವಧಿಯಲ್ಲೇ ಮನೆಗೆ ಕಳಿಸಲಾಗುತ್ತದೆ‌.

ಈ ಯೋಜನೆ ಮೂಲಕ ಕನಿಷ್ಠ ಪಕ್ಷ ಪಿಯುಸಿ ಮುಗಿಸಲಾಗದ ಯುವ ಜನತೆಯನ್ನು ಸೇನೆಗೆ ಸೇರ್ಪಡೆ ಮಾಡಲಾಗುತ್ತದೆ. ಅವರ ಕೈಯಲ್ಲಿ ಡಿಗ್ರಿಯೂ ಇರೋದಿಲ್ಲ. ಈ ಯುವಕರ ಪರವಾಗಿ ಕಾಂಗ್ರೆಸ್ ಖಂಡಿತಾ ನಿಲ್ಲುತ್ತದೆ ಎಂದರು.

ವಿಧಾನಸಭೆ ಪ್ರತಿಪಕ್ಷ ನಾಯಕ ಯು.ಟಿ.ಖಾದರ್ ಮಾತನಾಡಿ, ಕೇಂದ್ರ ಸರಕಾರ ‘ಅಗ್ನಿಪಥ್ ‘ ಮೂಲಕ ದೇಶದ ಯುವಕರನ್ನು ಉದ್ಯೋಗ, ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ. ಸರಕಾರಕ್ಕೆ ಸೈನಿಕರಿಗೆ ಸಂಬಳ, ಪಿಎಫ್, ಇಎಸ್ಐ ಕೊಡುವಷ್ಟೂ ಇಲ್ಲವೇ‌. ಅವರನ್ನು ಖಾಯಂ ಮಾಡೋದು ಬಿಟ್ಟು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿದೆ ಬಿಜೆಪಿ ಸರಕಾರ. ತಕ್ಷಣ ಈ ಅಗ್ನಿಪಥ್ ಯೋಜನೆಯನ್ನು ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published.