ಸೂರಿಕುಮೇರು ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ
ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬವನ್ನು ಇಂದು ಸಪ್ಟಂಬರ್ 8ರಂದು ವಿಜೃಂಭಣೆ, ಸಂಬ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ದಿವ್ಯ ಬಲಿಪೂಜೆಯು ಬೆಳಗ್ಗೆ 8:00 ಗಂಟೆಗೆ ಪ್ರಾರಂಭಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಕ್ಷೇತ್ರದ ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ವಿಜಯ್ ಮಚಾದೊ ಇವರು ಆಗಮಿಸಿದ್ದರು. ಪೂಜೆಯ ಮೊದಲು ಚರ್ಚ್ ಪ್ರವೇಶ ದ್ವಾರದ ಹತ್ತಿರವಿರುವ ಮಾತೆ ಮರಿಯಮ್ಮನವರ ಗ್ರೊಟ್ಟೊ ಬಳಿ ಪ್ರಾರ್ಥನೆ ನಡೆಸಿ ಹೊಸ ತೆನೆಯನ್ನು ಆಶೀರ್ವದಿಸಿದರು. ಮಕ್ಕಳು ಮಾತೆ ಮೇರಿಗೆ ಗೌರವಾರ್ಥವಾಗಿ ತಂದ ಪುಷ್ಪಗಳನ್ನು ಸ್ತುತಿಗೀತೆಯನ್ನು ಹಾಡುತ್ತಾ ಅರ್ಪಿಸಿದರು.
ಜೀವನದಲ್ಲಿ ವಿಸ್ಮಯಗಳು ಕಾಣಬೇಕಾದರೆ ದೂರದೂರದ ಪುಣ್ಯಕ್ಷೇತ್ರಗಳಿಗೆ ಹೋಗಬೇಕಂತಿಲ್ಲ. ಬದಲಾಗಿ ಸೂರಿಕುಮೇರು ಚರ್ಚ್ ನಲ್ಲಿಯೇ ಮಾತೆ ಮರಿಯಮ್ಮನವರ ಮುಕಾಂತರ ದೇವರಲ್ಲಿ ಬೇಡಿದರೆ ವಿಸ್ಮಯಗಳನ್ನು ಕಾಣಬಹುದು, ಕುಟುಂಬದಲ್ಲಿ ದಿನನಿತ್ಯ ಪ್ರಾರ್ಥನೆಯನ್ನು ಮಾಡಲು ಭಕ್ತಾಧಿಗಳಿಗೆ ಫಾದರ್ ಮಚಾದೊ ಕರೆ ನೀಡಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ ಇವರು ಒಂಬತ್ತು ದಿನಗಳಿಂದ ನಡೆದ ನೊವೆನಾ ಪ್ರಾರ್ಥನೆ ಹಾಗೂ ಮೊಂತಿ ಹಬ್ಬ ವಿಜೃಂಭಣೆಯಿಂದ ಆಚರಿಸಲು ಸಹಕರಿಸಿದ ಚರ್ಚ್ ಪಾಲನಾ ಸಮಿತಿ ಮತ್ತು ಎಲ್ಲಾ ಭಕ್ತಾಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಚರ್ಚ್ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಎಲಿಯಾಸ್ ಪಿರೇರಾ ಮತ್ತು ಎಲ್ಲಾ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಸಮಸ್ತ ಭಕ್ತಾಧಿಗಳಿಗೆ ಹೊಸ ತೆನೆ, ಕಬ್ಬು ಮತ್ತು ಸಿಹಿಯನ್ನು ವಿತರಿಸಲಾಯಿತು.