ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೊಕ್ಕಡ ವಲಯ ಮಟ್ಟದ ಪ್ರತಿಭಾ ಕಾರಂಜಿ
ಉಜಿರೆ: ಶಾಲಾ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಮತ್ತು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ ಇದರ ಸಹಭಾಗಿತ್ವದಲ್ಲಿ ಕೊಕ್ಕಡ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸಪ್ಟಂಬರ್ 11ರಂದು ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ವಹಿಸಿದ್ದರು. ತಾಲೂಕಿನ ಶಿಕ್ಷಣಾಧಿಕಾರಿ ತಾರಾ ಕೇಸರಿಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಶಿಕ್ಷಣಾಧಿಕಾರಿ, “ಪ್ರತಿಭಾ ಕಾರಂಜಿಯು ಮಕ್ಕಳ ಪ್ರತಿಭೆಯ ಪ್ರದರ್ಶನಕ್ಕೊಂದು ಉತ್ತಮ ವೇದಿಕೆ. ವಿದ್ಯಾರ್ಥಿಗಳಿಗೆ ಗೆಲುವು ಮಾತ್ರ ಮುಖ್ಯವಲ್ಲ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಇದು” ಎಂದು ಹೇಳಿದರು. ಶಾಲೆಯ ಸಂಚಾಲಕರಾದ ವಂದನೀಯ ಫಾದರ್ ಆಬೆಲ್ ಲೋಬೊ ಮಾತನಾಡಿ, “ಪ್ರತಿಭೆ ಎಂಬುದು ದೇವರ ಕರುಣೆ. ಅದಕ್ಕೆ ಪೋಷಣೆ ನೀಡುವ ಕಾರ್ಯ ಶಿಕ್ಷಣ ಇಲಾಖೆಯಿಂದ ಆಗುತ್ತಿದೆ. ಇದರಿಂದ ವಿದ್ಯಾರ್ಥಿಯ ವ್ಯಕ್ತಿತ್ವ ಅರಳುತ್ತದೆ” ಎಂದು ಹೇಳಿದರು. ಶಿಕ್ಷಣ ಸಂಯೋಜಕಿ ಚೇತನಾಕ್ಷೀ, ಕ್ಷೇತ್ರ ಸಮೂಹ ವ್ಯಕ್ತಿ ಪ್ರತಿಮಾ ಕೆ.ಎಂ., ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ವಿಜಯ್ ಲೋಬೊ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಡಿಸೋಜ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅ್ಯಂಟನಿ ಫೆರ್ನಾಂಡೀಸ್ ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಉಪಹಾರ ಹಾಗೂ ಭೋಜನದ ಪ್ರಾಯೋಜಕರಾದ ಹರೀಶ್ ಪೈ ಮತ್ತು ಉಮೇಶ್ ಶೆಟ್ಟಿಯವರಿಗೆ ಸಂಸ್ಥೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಲಾಯಿತು. ಈ ವೇಳೆ 27 ಶಾಲೆಯ ವಿದ್ಯಾರ್ಥಿಗಳು ಧಾರ್ಮಿಕ ಪಠಣ, ಕನ್ನಡ ಭಾಷಣ, ಆಶುಭಾಷಣ, ಚಿತ್ರಕಲೆ, ರಂಗೋಲಿ, ಭಾವಗೀತೆ, ಜನಪದ ಗೀತೆ, ಕವ್ವಾಲಿ, ಭರತನಾಟ್ಯ, ಜಾನಪದ ನೃತ್ಯ ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕಾರ‍್ಯಕ್ರಮದ ಕೊನೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಪ್ರಾಂಶುಪಾಲರಾದ ವಂದನೀಯ ಫಾದರ್ ವಿಜಯ್ ಲೋಬೊ ಸ್ವಾಗತಿಸಿ, ಸಹ ಶಿಕ್ಷಕಿ ಅರ್ಪಿತ ವಂದಿಸಿ, ಸಹ ಶಿಕ್ಷಕ ಗಣೇಶ್ ಕಾರ‍್ಯಕ್ರಮವನ್ನು ನಿರೂಪಿಸಿದರು.