ಮನೆಯಲ್ಲಿ ಯಾರು ಇಲ್ಲದ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವು
ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವಿನ ಮನೆಯೊಂದರಲ್ಲಿ ಯಾರು ಇಲ್ಲದ ವೇಳೆ ಮುಂಬಾಗಿಲ ಚಿಲಕ ಮುರಿದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವುಗೈದಿರುವ ಬಗ್ಗೆ ಗುರುವಾರ ಬೆಳಕಿಗೆ ಬಂದಿದೆ.
ಪುದು ಗ್ರಾಮದ ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಅವರು ಪತ್ನಿ ಜೊತೆ ಸಪ್ಟಂಬರ್ 8ರಂದು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಸಪ್ಟಂಬರ್ 12ರಂದು ಮನೆಗೆ ವಾಪಸು ಬಂದಿದ್ದು, ಮನೆಯ ಮುಂಬಾಗಿಲ ಚಿಲಕ ಮುರಿದು ಹಾಕಿದ್ದು ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಒಳಗಡೆ ಹೋಗಿ ನೋಡಿದಾಗ ಕೋಣೆಯ ಬಾಗಿಲು ತೆರೆದು ಅಲ್ಲಿದ್ಧ ಗೋಡ್ರೇಜ್ ಬೀಗ ಒಡೆಯಲಾಗಿತ್ತು. ಅದರೊಳಗೆ ಇರಿಸಲಾಗಿದ್ದ ರೂಪಾಯಿ 1,70,000 ನಗದು ಹಾಗೂ 36 ಗ್ರಾಂ ತೂಕದ ರೂಪಾಯಿ 1,80,000 ಮೌಲ್ಯದ ಚಿಹ್ನದ ಪೆಂಡೆಂಟ್ ಇರುವ ಸರ ಹಾಗೂ ಕಪಾಟಿನ ಮೇಲೆ ಇದ್ದ 4,000 ರೂಪಾಯಿ ಮೌಲ್ಯದ ವಿವೋ ಮೊಬೈಲ್ ಪೋನ್ ಸೇರಿ ಒಟ್ಟು 3.54 ಲಕ್ಷ ರೂಪಾಯಿ ಮೌಲ್ಯದ ನಗ ನಗದು ಕಳವಾಗಿದೆ ಎಂದು ಅವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ್, ಠಾಣಾಧಿಕಾರಿಗಳಾದ ಹರೀಶ್ ಮತ್ತು ಮೂರ್ತಿ ಅವರು ಬೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ.