ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ದಶಂಬರ್ 14ರವರೆಗೆ ಅವಧಿ ವಿಸ್ತರಣೆ
ಪ್ರತಿಯೊಬ್ಬ ನಾಗರೀಕನ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್‌ನಲ್ಲಿರುವ ಫೋಟೋ ಉಚಿತವಾಗಿ ಅಪ್ಡೇಟ್ ಮಾಡುವ ಅವಧಿಯನ್ನು ದಶಂಬರ್14ವರೆಗೆ ವಿಸ್ತರಣೆ ಮಾಡಲಾಗಿದೆ. ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಲು ಸೆಪ್ಟೆಂಬರ್ 14ರಂದು ಗಡುವು ಮುಗಿಯಲಿದೆ ಎಂಬ ಪ್ರಕಟಣೆಯಿಂದ ಆತಂಕಕ್ಕೊಳಗಾಗಿದ್ದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಆಧಾರ್ ಕಾರ್ಡ್ ಪಡೆದು 10 ವರ್ಷಗಳು ಪೂರ್ಣಗೊಂಡವರಿಗೆ ಮಾಹಿತಿಯನ್ನು ಉಚಿತವಾಗಿ ನವೀಕರಿಸಲು ದಿನಾಂಕವನ್ನು ಮತ್ತೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಹೊಸ ಆದೇಶದ ಪ್ರಕಾರ, 2024 ರ ದಶಂಬರ್ 14 ರವರೆಗೆ ಶುಲ್ಕವಿಲ್ಲದೆ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಮಾಹಿತಿಯನ್ನು ನವೀಕರಿಸಿಕೊಳ್ಳಬಹುದು ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ತಿಳಿಸಿದೆ. ಆಧಾರ್ ಒಬ್ಬ ನಾಗರಿಕನ ಪ್ರಮುಖ ಗುರುತಿನ ದಾಖಲೆಯಾಗಿರುವುದರಿಂದ, ಇಲ್ಲಿಯವರೆಗೆ ನವೀಕರಿಸದವರು ತಕ್ಷಣವೇ ನವೀಕರಿಸಿಕೊಳ್ಳಬೇಕೆಂದು ಯುಐಡಿಎಐ ಮನವಿ ಮಾಡಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಮಾಹಿತಿಯನ್ನು ನವೀಕರಿಸಬೇಕೆಂದು ಯುಐಡಿಎಐ ಸೂಚಿಸಿದೆ. ಇದರೊಂದಿಗೆ, ಉಚಿತವಾಗಿ ಆಧಾರ್ ಅನ್ನು ನವೀಕರಿಸಲು ಕೇಂದ್ರ ಸರ್ಕಾರವು ಹಲವಾರು ಬಾರಿ ಗಡುವನ್ನು ವಿಸ್ತರಿಸಿದೆ. ಈಗ ಸಮಯ ಮಿತಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಆದೇಶದ ಪ್ರಕಾರ, ಡಿಸೆಂಬರ್ 14ರವರೆಗೆ ಹೆಸರು, ವಿಳಾಸ ಮುಂತಾದವುಗಳನ್ನು ಉಚಿತವಾಗಿ ನವೀಕರಿಸಬಹುದು ಅಥವಾ ತಿದ್ದುಪಡಿ ಮಾಡಬಹುದು. ದಶಂಬರ್ 14ರ ನಂತರ ಮಾಹಿತಿಯನ್ನು ನವೀಕರಿಸಲು ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತ ಸೇವೆಯು ಎಂ-ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಜನಸಂಖ್ಯಾ ಮಾಹಿತಿಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ನಾಗರಿಕರಿಗೆ ಹೆಚ್ಚಿನ ಅನುಕೂಲತೆಯನ್ನು ಖಚಿತಪಡಿಸಿಕೊಳ್ಳಲು ಈ ಉಚಿತ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಯುಐಡಿಎಐ ಹೇಳಿದೆ.
ನೀವು ಹತ್ತು ವರ್ಷಗಳ ಹಿಂದೆ ಆಧಾರ್ ಪಡೆದಿದ್ದರೆ, ನಿಮ್ಮ ವಿವರಗಳನ್ನು ನವೀಕರಿಸುವುದು ಅತ್ಯಗತ್ಯ. ಗುರುತಿನ ಪುರಾವೆ, ವಿಳಾಸ ಪುರಾವೆ ದಾಖಲೆಗಳನ್ನು ನೀಡಬೇಕಾಗುತ್ತದೆ. ಮೈ ಆಧಾರ್ ಪೋರ್ಟಲ್ ಮೂಲಕ ಮಾತ್ರ ಉಚಿತ ಸೇವೆ ಲಭ್ಯವಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಇತರ ವಿವರಗಳನ್ನು ಯುಐಡಿಎಐ ವೆಬ್‌ಸೈಟ್‌ನ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ನವೀಕರಿಸಬಹುದು. ಆದರೆ, ಫೋಟೋ ಮತ್ತು ಬಯೋಮೆಟ್ರಿಕ್ ಮುಂತಾದ ಮಾಹಿತಿಯನ್ನು ನವೀಕರಿಸಲು ಹತ್ತಿರದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಬೇಕಾಗುತ್ತದೆ.
ಎಂ–ಆಧಾರ್ ಪೋರ್ಟಲ್ ಮೂಲಕ ಆಧಾರ್ ಅನ್ನು ಹೇಗೆ ನವೀಕರಿಸುವುದು?
1: https://myaadhaar.uidai.gov.in/ ಲಿಂಕ್ ತೆರೆಯಿರಿ
2: ನಿಮ್ಮ ಆಧಾರ್ ಸಂಖ್ಯೆ ಅಥವಾ ದಾಖಲಾತಿ ಐಡಿಯನ್ನು ಬಳಸಿಕೊಂಡು ಲಾಗಿನ್ ಮಾಡಿ ಮತ್ತು ನಂತರ ‘ಹೆಸರು/ಲಿಂಗ/ಜನ್ಮ ದಿನಾಂಕ, ವಿಳಾಸ ನವೀಕರಣ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
3: ನಂತರ ‘ಆಧಾರ್ ಅನ್ನು ಆನ್‌ಲೈನ್‌ನಲ್ಲಿ ನವೀಕರಿಸಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4: ಆಯ್ಕೆಗಳ ಪಟ್ಟಿಯಿಂದ, ‘ವಿಳಾಸ’ ಅಥವಾ ‘ಹೆಸರು’ ಅಥವಾ ‘ಲಿಂಗ’ ಆಯ್ಕೆಮಾಡಿ ಮತ್ತು ನಂತರ ‘ಆಧಾರ್ ನವೀಕರಿಸಲು ಮುಂದುವರಿಯಿರಿ’ ಕ್ಲಿಕ್ ಮಾಡಿ.
5: ವಿಳಾಸವನ್ನು ನವೀಕರಿಸುವಾಗ, ನವೀಕರಿಸಿದ ವಿಳಾಸದ ಪುರಾವೆಗಾಗಿ ಸ್ಕ್ಯಾನ್ ಮಾಡಿದ ಪ್ರತಿಯನ್ನು ನೀವು ಅಪ್‌ಲೋಡ್ ಮಾಡಬೇಕಾಗುತ್ತದೆ.
6: ದಶಂಬರ್ 14ರವರೆಗೆ ಯಾವುದೇ ಪಾವತಿಯನ್ನು ಮಾಡಬೇಕಾಗಿಲ್ಲ, ಅದರ ನಂತರ ಈ ನವೀಕರಣಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ.
7: ಅಂತಿಮವಾಗಿ, ಹೊಸ ವೆಬ್ ಪುಟ ತೆರೆಯುತ್ತದೆ ಮತ್ತು ಅದಕ್ಕೆ ‘ಸೇವಾ ವಿನಂತಿ ಸಂಖ್ಯೆ’ (SRN) ಇರುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ಇದನ್ನು ಸೇವ್ ಮಾಡಿಕೊಳ್ಳಿ.