ಬಜ್ಪೆಯಲ್ಲಿ ಉಚಿತ ಯೋಗ ಶಿಕ್ಷಣ ತರಗತಿಗಳು ಪ್ರಾರಂಭ
ರೋಟರಿ ಕ್ಲಬ್ ಬಜ್ಪೆ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕಾವೂರು ನಗರ ಇವರ ಸಹಯೋಗದೊಂದಿಗೆ 48 ದಿವಸಗಳ ಉಚಿತ ಯೋಗ ಶಿಕ್ಷಣ ತರಗತಿಯು ಸಪ್ಟಂಬರ್ 15ರಂದು ಆದಿತ್ಯವಾರ ಸಂಜೆ 5:30ಕ್ಕೆ ಬಜ್ಪೆಯಲ್ಲಿರುವ ರೋಟರಿ ಕ್ಲಬ್ ಸ್ವಾಮಿಲಪದವು ಇಲ್ಲಿ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾರ ಶಾಖೆಯ ಯೋಗ ಶಿಕ್ಷಕಿ ಪವಿತ್ರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಜ್ಪೆ ರೋಟರಿ ಕ್ಲಬ್ ನ ಅಧ್ಯಕ್ಷ ಜೋಕಿಂ ಡಿಕೋಸ್ತ ಆಗಮಿಸಿದ್ದರು. ಸಮಾರಂಭದಲ್ಲಿ ಬಜ್ಪೆ ಶಾಖೆಯ ಶಿಕ್ಷಕ ಪದ್ಮನಾಭ ಇವರು ಯೋಗದ ಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು.
ಯೋಗ ಶಿಕ್ಷಣದ ಜೊತೆಗೆ ಆರೋಗ್ಯ, ಧನಾತ್ಮಕ ಚಿಂತನೆ, ಕ್ರಿಯಾಶೀಲ ವ್ಯಕ್ತಿತ್ವ, ಆದರ್ಶ ಕುಟುಂಬದ ತರಬೇತಿ ನೀಡುತ್ತಾ ಸಮಾಜದಲ್ಲಿ ಉತ್ತಮವಾದ ಪರಿವರ್ತನೆಗೆ ಕಾರಣವಾಗಿದೆ. ಮಧುಮೇಹ, ರಕ್ತದೊತ್ತಡ, ಬೊಜ್ಜಿನ ಸಮಸ್ಯೆ, ಆ್ಯಸಿಡಿಟಿ, ನೆನಪಿನ ಶಕ್ತಿಯ ಚುರುಕಿಗೆ, ಸಂಧಿವಾತ, ನಿದ್ರಾಹೀನತೆ, ಮಾನಸಿಕ ಒತ್ತಡ, ಮೂಲವ್ಯಾಧಿ, ಗಂಟುನೋವು, ಬೆನ್ನುನೋವು, ಮೈಗ್ರೇನ್, ತಲೆನೋವು ಇವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮವನ್ನು ಯೋಗದ ಮೂಲಕ ನೀಡಿ ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಬಹುದು. ಕೇಂದ್ರ ಸಮಿತಿಯಿಂದ ತರಬೇತಿ ಪಡೆದ ಶಿಕ್ಷಕರಿಂದ ತರಗತಿಗಳನ್ನು ನಡೆಸಲಾಗುವುದು. 10 ರಿಂದ ಮೇಲ್ಪಟ್ಟ ಎಲ್ಲಾ ವಯಸ್ಸಿನವರು ಭಾಗವಹಿಸಬಹುದು. ನಿತ್ಯ ತರಗತಿ ಸಪ್ಟಂಬರ್ 16ರಿಂದ ಬೆಳಿಗ್ಗೆ 5:00 ರಿಂದ 6:30 ರವರೆಗೆ ನಡೆಯುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಬಜ್ಪೆ ಶಾಖೆಯ ಯೋಗ ಬಂಧುಗಳು ನೆರವೇರಿಸಿ, ಕೇಶವ ವಯುಕ್ತಿಕ ಪ್ರಾರ್ಥನೆ ಸಲ್ಲಿಸಿ, ದೇವ್ ದಾಸ್ ಸ್ವಾಗತಿಸಿ, ಗಂಗಾಧರ ವಂದಿಸಿ, ಮಾಧವ ನಿರೂಪಿಸಿದರು. ಲಘು ಉಪಹಾರ ಪ್ರಸಾದವನ್ನು ಅನ್ನ ಪೂರ್ಣೇಶ್ವರಿ ಮಂತ್ರದೊಂದಿಗೆ ಚಿನ್ಮಯಿ ನೀಡಿದರು. ಸಮಾರಂಭದಲ್ಲಿ ಒಟ್ಟು 41 ಮಂದಿ ಭಾಗವಹಿಸಿದ್ದರು.