ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಮಿಲಾದುನ್ನಬಿ ಆಚರಣೆ
ಪ್ರವಾದಿ (ಸ.ಅ)ರವರ ಗುಣಗಾನ ಹೇಳಿ ಮುಗಿಯುವಂತದ್ದು ಅಲ್ಲ: ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್.
ಮಾಣಿ : ಇಲ್ಲಿನ ಸೂರಿಕುಮೇರು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಮಿಲಾದುನ್ನಬಿ ಆಚರಣೆ ನಡೆಸಲಾಯಿತು. ಮೂರು ದಿನಗಳ ಕಾರ್ಯಕ್ರಮದಲ್ಲಿ, ಮದ್ರಸಾ ಮಕ್ಕಳ ಸಾಂಸ್ಕೃತಿಕ ಮಿಲಾದ್ ಫೆಸ್ಟ್, ಧಾರ್ಮಿಕ ಪ್ರವಚನ, ಬುರ್ದಾ ಮಜ್ಲಿಸ್, ದಫ್ ಪ್ರದರ್ಶನ, ಮೌಲಿದ್ ಪಾರಾಯಣ, ದುಆ ಮಜ್ಲಿಸ್, ಸೂರಿಕುಮೇರು, ಹಳೀರ, ಮಾಣಿ, ದಾಸಕೋಡಿ, ಕಾಯರಡ್ಕ ಮಾರ್ಗವಾಗಿ ಆಕರ್ಷಕ ಮಿಲಾದ್ ಮೆರವಣಿಗೆ, ಮುಂತಾದ ಕಾರ್ಯಕ್ರಮಗಳು ನಡೆಯಿತು.
ಜಮಾಅತಿನ ಪ್ರಮುಖ ಮೌಲಿದ್ ಮಜ್ಲಿಸ್ ನಲ್ಲಿ ದುಆಗೆ ನೇತೃತ್ವ ನೀಡಿದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಮಾತನಾಡಿ, ಪ್ರವಾದಿ (ಸ.ಅ)ರವರ ಗುಣಗಾನ ಹೇಳಿ ಹೇಳಿ ಮುಗಿಯುವಂತದ್ದು ಅಲ್ಲ. ಅವರೊಂದು ಅದ್ಭುತ ಆಗಿರುತ್ತಾರೆ. ಸ್ವತಃ ಅಲ್ಲಾಹನೇ ಪ್ರವಾದಿ ಮುಹಮ್ಮದ್ (ಸ.ಅ)ರವರ ಸಾಕಷ್ಟು ಗುಣಗಾನ ಮಾಡಿರುವುದೇ ನಮಗೆ ಮಾದರಿಯಾಗಿರುತ್ತದೆ ಎಂದರು. ಮಿಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಜಮಾಅತಿನ ಹಾಫಿಳ್ ಬಿರುದುದಾರಿ ವಿದ್ಯಾರ್ಥಿಗಳಾದ ರಿಫಾಝ್, ರಾಫಿಲ್, ಅನಸ್, ಮುರ್ಶಿದ್ ಮತ್ತು ಪ್ರತೀ ವರ್ಷ ಬಹುಮಾನಗಳಿಗೆ ಪ್ರಾಯೋಜಕರಾಗಿ ಸಹಕರಿಸುತ್ತಿರುವ ಉದ್ಯಮಿ ಇಸ್ಮಾಯಿಲ್ ಸೂರಿಕುಮೇರು (ಇಚ್ಚಾಲಿ) ಹಾಗೂ ಆಕರ್ಷಕ ರೀತಿಯಲ್ಲಿ ತಳಿರು ತೋರಣ ಲೈಟಿಂಗ್ ಅಳವಡಿಸಿ ಮಿಲಾದ್ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಿರುವ ಯಾಸಿರ್ ಯಾಚಿ ಹಾಗೂ ತೌಫೀಕ್ ನೆಲ್ಲಿರವರ ತಂಡಕ್ಕೆ ಗೌರವ ಅಭಿನಂದನೆ ಸಲ್ಲಿಸಲಾಯಿತು.
GSF ಗಲ್ಫ್ ಕಮಿಟಿ ಸೂರಿಕುಮೇರು ಸಂಘಟನೆಯು ವಿದ್ಯಾರ್ಥಿಗಳಿಗೆ ಬುರ್ಖಾ ಸಮವಸ್ತ್ರ ನೀಡಿ ಗೌರವಿಸಿತು. ಜಮಾಅತ್ ವ್ಯಾಪ್ತಿಯಲ್ಲಿ ಹಲವಾರು ಸಾಂತ್ವನ ಚಟುವಟಿಕೆಗಳ ಮೂಲಕ GSF ಕಮಿಟಿ ನೀಡುತ್ತಿರುವ ಸೇವೆಯನ್ನು ಈ ಸಮಯದಲ್ಲಿ ಪ್ರಶಂಶಿಸಿ ದುಆ ಮಾಡಲಾಯಿತು. ಜಲೀಲ್ ಸೂರಿಕುಮೇರು, ಮಜೀದ್ ಸೂರಿಕುಮೇರು ನೇತೃತ್ವದ ಯುವಕರ ತಂಡ ಮಸೀದಿಗೆ ಒಂದು ಲಕ್ಷ ಫಂಡ್ ಸಂಗ್ರಹಿಸಿ ನೀಡಿದರು. ಮಿಲಾದ್ ಮೆರವಣಿಗೆಯನ್ನು ಅಲ್ಲಲ್ಲಿ ತಂಪು ಪಾನೀಯ, ಸಿಹಿತಿಂಡಿ, ಐಸ್‌ಕ್ರೀಂ ನೀಡುವ ಮೂಲಕ ಜಮಾಅತಿಗರು ಮತ್ತು ಮಾಣಿ ಜಂಕ್ಷನ್ ಬಳಿ ಹಿಂದೂ ಸಹೋದರರು ಸ್ವಾಗತಿಸಿದರು. ಸೂರಿಕುಮೇರು ಬದ್ರಿಯಾ ಫ್ರೆಂಡ್ಸ್, ಯಂಗ್‌ಮೆನ್ಸ್ ಮತ್ತು ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ಮಾಣಿ ಸಹಿತ ವಿವಿಧ ಸಂಘಟನೆಗಳು ಮಿಲಾದ್ ಕಾರ್ಯಕ್ರಮದ ವಿಜಯದಲ್ಲಿ ಕಾರ್ಯ ನಿರ್ವಹಿಸಿದವ.
ಖತೀಬ್ ಸಿ.ಹೆಚ್. ಹಸೈನಾರ್ ಸಅದಿ ಕುಂಬಳೆ, ಸದರ್ ಅಬ್ದುಲ್ ನಾಸಿರ್ ಸಅದಿ ನೇರಳಕಟ್ಟೆ, ಮುಅಲ್ಲಿಂ ಅಶ್ರಫ್ ಮುಸ್ಲಿಯಾರ್ ಕಡಂಬು, ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಸೂರಿಕುಮೇರು, ಕಾರ್ಯದರ್ಶಿ ಅಮೀರುದ್ದೀನ್, ಕೋಶಾಧಿಕಾರಿ ಯೂಸುಫ್ ಹಾಜಿ ಸಹಿತ ಜಮಾಅತ್ ಕಮಿಟಿ ಸದಸ್ಯರುಗಳು, ಯುವಕರು, ಊರ ನಾಗರಿಕರು ಉಪಸ್ಥಿತರಿದ್ದು ಸಹಕರಿಸಿದರು, ಮದ್ರಸಾ ಮಕ್ಕಳ ಕಾರ್ಯಕ್ರಮವನ್ನು ಗಝ್ಝಾಲಿ ಕುಡ್ತಮುಗೇರು ನಿರೂಪಿಸಿದರು.