ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ಕಳೆದುಕೊಂಡ ಅರ್ಚನಾ ಕಾಮತ್…!!
ಮಂಗಳೂರು ಸಪ್ಟಂಬರ್ 16: ಇನ್ನೊಬ್ಬರ ಜೀವ ಉಳಿಸಲು ಹೋಗಿ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ. ಕನ್ನಡ ಸಿನೆಮಾದ ಆ ಕರ್ಣನಂತೆ, ನೀ ದಾನಿಯಾದೆ ಇನ್ನೊಂದು ಜೀವಕ್ಕೆ ನೀ ಆಧಾರವಾದೆ ಎಂಬ ವಿಷ್ಣುವರ್ಧನ್ ನಟನೆಯ ಸಿನಿಮಾದ ಹಾಡಿನಂತೆ ಅರ್ಚನಾ ಕಾಮತ್ ಜೀವವೂ ಇನ್ನೊಬ್ಬರಿಗೆ ಜೀವ ಕೊಟ್ಟು ತನ್ನ ಜೀವ ತ್ಯಾಗ ಮಾಡಿದಂತಾಗಿದೆ.
ನಗರದ ಕರಂಗಲ್ಪಾಡಿ ನಿವಾಸಿ, ಮಂಗಳೂರಿನ ಪ್ರಸಿದ್ದ ಲೆಕ್ಕಪರಿಶೋಧಕ ಚೇತನ್ ಕಾಮತ್ ಅವರ ಪತ್ನಿ, ವೃತ್ತಿಯಲ್ಲಿ ಉಪನ್ಯಾಸಕಿಯಾದ ಅರ್ಚನಾ ಕಾಮತ್ (33) ಮೃತ ದುದೈವಿ. ಅವರ ನಾಲ್ಕು ವರ್ಷದ ಮಗು ಈವಾಗ ಅನಾಥವಾಗಿದೆ. ಯಕೃತ್ತಿಗೆ (ಲಿವರ್) ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರೊಬ್ಬರಿಗೆ ತನ್ನ ಯಕೃತ್ತನ್ನು ದಾನ ಮಾಡಿದ್ದರು. ಈ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ವೇಳೆ ಸೊಂಕಿಗೆ ತುತ್ತಾಗಿದ್ದರು ಎಂದು ಹೇಳಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಸದಾ ಸಮಾಜಮುಖಿ ಚಿಂತನೆಯೊಂದಿಗೆ ಅರ್ಚನಾ ಕಾಮತ್ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಸುದ್ದಿ ಇಡೀ ಸಮಾಜವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸಂಬಂಧಿಕರು, ಆತ್ಮೀಯರು ಆಘಾತಕಾರಿ ಸುದ್ದಿ ತಿಳಿದು ಕಂಬನಿ ಮಿಡಿದಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ. ಅರ್ಚನಾ ಕಾಮತ್ ಅವರ ಸಾವಿಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. ಮೃತದೇಹವನ್ನು ಕರಂಗಲ್ಪಾಡಿಯಯ ನಿವಾಸಕ್ಕೆ ತಂದು ವಿಧಿ ವಿಧಾನ ನೆರವೇರಿಸಿದ ಬಳಿಕ ಕುಂದಾಪುರದ ಕೋಟೆಶ್ವರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅರ್ಚನಾ ಮೂಲತಃ ಕುಂದಾಪುರದವರಾಗಿದ್ದು ಮಂಗಳೂರಿಗೆ ಮದುವೆಯಾಗಿ ಬಂದಿದ್ದರು.