ಬಂಟ್ವಾಳ : ಸೋಮವಾರ ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದ ಬಿ.ಸಿ. ರೋಡ್ ಮಂಗಳವಾರ ಸಂಪೂರ್ಣ ಸಹಜ ಸ್ಥಿತಿಗೆ
ಬಂಟ್ವಾಳ : ಇಬ್ಬರ ಪ್ರಚೋದನಕಾರಿ ಹೇಳಿಕೆಗಳಿಂದ ಸೋಮವಾರ ಉದ್ವಿಗ್ನ ಪರಿಸ್ಥಿತಿಗೆ ತಲುಪಿದ್ದ ಬಂಟ್ವಾಳ ಇಂದು (ಮಂಗಳವಾರ) ಯಾವುದೇ ರೀತಿಯ ಗೊಂದಲವಿಲ್ಲದೆ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಸಪ್ಟಂಬರ್ 16ರಂದು ಬೆಳಗ್ಗೆ ಸಂಘಪರಿವಾರದ ಬಿ.ಸಿ. ರೋಡ್ ಚಲೋ ಕಾರ್ಯಕ್ರಮದ ಸಂದರ್ಭದಲ್ಲಿ ಮಧ್ಯಾಹ್ನದ ವರೆಗೆ ವಿಕೋಪಕ್ಕೆ ತಿರುಗಿದ್ದ ಬಿ.ಸಿ. ರೋಡ್ ಮಧ್ಯಾಹ್ನದ ಬಳಿಕ ನಿಧಾನವಾಗಿ ಶಾಂತ ರೀತಿಗೆ ಮಾರ್ಪಾಡಾಗಿತ್ತು. ಮಂಗಳವಾರ ಬೆಳಿಗ್ಗೆಯಿಂದ ಜನಸಂಚಾರ ಎಂದಿನಂತೆ ಇದ್ದು, ಪೋಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಕೋಮು ಸಂಘರ್ಷಕ್ಕೆ ಕಾರಣವಾದ ಇಬ್ಬರು ಪ್ರಚೋದನಕಾರಿ ಹೇಳಿಕೆಗಳಿಂದ ಆರಂಭವಾದ ಗೊಂದಲ, ಬಂಟ್ವಾಳವನ್ನು ಮತ್ತೆ ಕೋಮು ಗಲಭೆಯತ್ತ ತಿರುಗುತ್ತದೆ ಎಂಬ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿತ್ತು. ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಸ್ವತಃ ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದ ಮೇಲೆ ನಿಗಾ:
ಠಾಣಾ ನಿರೀಕ್ಷಕ ಆನಂತ ಪದ್ಮನಾಭ ಬಿ.ಸಿ. ರೋಡ್ ಘಟನೆಯ ಬಳಿಕ ಪೋಲೀಸರು ವ್ಯಾಟ್ಸ್ ಆಪ್, ಟ್ವಿಟರ್, ಪೇಸ್ ಬುಕ್, ಇನ್ಸ್ಟಾಗ್ರಾಂ ಸಹಿತ ಎಲ್ಲಾ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳ ಸಹಿತ ಗೊಂದಲ ಮೂಡಿಸುವ ಕೆಲಸಗಳನ್ನು ಮಾಡುವ ಸಂದೇಶಗಳನ್ನು ನಿಗಾ ವಹಿಸಿ, ತಿಳಿದುಕೊಳ್ಳಲು ಪೋಲೀಸ್ ಇಲಾಖೆ ಪ್ರತ್ಯೇಕವಾಗಿ ತಂಡ ರಚನೆ ಮಾಡಿದೆ. ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮವನ್ನು ತೆಗೆದು ಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.