ಸಮಾಜ ಬಾಹಿರ ಶಕ್ತಿಗಳ ವಿರುದ್ಧ ಹೋರಾಡಿದ ದಿಟ್ಟೆದೆಯ ಇನ್ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ – ಪುತ್ತೂರಿನ ಸಮಾಜ ಕಂಠಕರನ್ನು ದಮನಿಸಲು ಮುಂದಾಗುವರೇ?
ಕೋಮು ಗಲಭೆಗಳ ಕೊಂಪೆ ಎಂದೂ, ಗೂಂಡಾಗಿರಿಯ ತವರೂರು ಎಂದೂ ರಾಜ್ಯದಲ್ಲೇ ಕುಖ್ಯಾತಿ ಪಡೆದ ಪುತ್ತೂರಿನಲ್ಲಿ ಈ ಹಿಂದೆ ಸಿ.ಎಂ. ಇಕ್ಬಾಲ್, ಲವಕುಮಾರ್, ವಿಶ್ವನಾಥ ಪಂಡಿತ್, ರವೀಶ್, ಶೇಖರಪ್ಪ, ನಾಗಭೂಷಣ್, ಶ್ರೀ ಕಾಂತ್, ಮಹೇಶ್ ಪ್ರಸಾದ್, ತಿಮ್ಮಪ್ಪ ನಾಯಕ್, ಸತೀಶ್ ಮೊದಲಾದ ಅಧಿಕಾರಿಗಳು ಇಲ್ಲಿ ದಕ್ಷ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಇನ್ನು ಕೆಲವರು ಇಲ್ಲಿನ ಕರ್ತವ್ಯ ಪಾಲನೆಯಲ್ಲಿ ವಿಫಲರಾಗಿ ಇಲ್ಲಿಂದ ಪಲಾಯನ ಗೈದ ಉದಾಹರಣೆಗಳು ಇವೆ.
ಪ್ರಕ್ಷುಬ್ಧ ಪುತ್ತೂರು ಪ್ರದೇಶದಲ್ಲಿ ಒಂದಿಲ್ಲೊಂದು ರೀತಿಯ ಗಲಭೆ, ಗೂಂಡಾಗಿರಿ, ಪುಂಡಾಟಿಕೆಯಂತಹ ಅಹಿತಕರ ಘಟನೆಗಳು ಪದೇಪದೇ ಸಂಭವಿಸುತ್ತಲೇ ಇರುತ್ತದೆ. ಅದರೊಂದಿಗೆ ಅಕ್ರಮ ದಂಧೆ ಸಮಾಜ ಬಾಹಿರ ಚಟುವಟಿಕೆಗಳು ಈ ಎಲ್ಲಾ ಅನಿಷ್ಟಕಾರಿ ಪ್ರವೃತ್ತಿಗಳನ್ನು ನಿಗ್ರಹಿಸಲು ಸಮರ್ಥರಾದ ಪೋಲಿಸ್ ಅಧಿಕಾರಿಗಳನ್ನೇ ನೇಮಿಸುವುದು ಬಹು ಕಾಲದಿಂದ ನಡೆದು ಬಂದ ವಾಡಿಕೆ. ಪಾಂಡೇಶ್ವರದಿಂದ ಮೊದಲ್ಗೊಂಡು ಕಾಪು, ಕುಂದಾಪುರ, ಕಾರವಾರ, ಭಟ್ಕಳ, ಚಿಕ್ಕಮಗಳೂರು, ಮಂಗಳೂರು ಗ್ರಾಮಾಂತರದವರೆಗೆ ಎಸ್.ಐ.ಯಾಗಿಯೂ ಇನ್ಸ್ಪೆಕ್ಟರ್ ಆಗಿಯೂ ಸಾರ್ವಜನಿಕರಿಂದ ಮನ್ನಣೆಗಳಿಸಿದ ಜಾನ್ಸನ್ ಡಿಸೋಜ ಯಾವುದೇ ದುರಚಾರ ಮೈಗೂಡಿಸಿಕೊಂಡವರಲ್ಲ. ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗುವವರಲ್ಲ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಾನವೀಯ ಗುಣವುಳ್ಳವರು. ಇಂತಹ ಒಬ್ಬ ದಿಟ್ಟೆದೆಯ ಇನ್ಸ್ಪೆಕ್ಟರ್ ರವರನ್ನು ಸರಕಾರ ಪುತ್ತೂರಿಗೆ ನಿಯುಕ್ತಿಗೊಳಿಸಿ ಬಹು ದೊಡ್ಡ ಕೊಡುಗೆ ನೀಡಿದೆ. ಜಾನ್ಸನ್ ಕಿರಣ್ ಡಿಸೋಜ ಪುತ್ತೂರು ನಗರ ಠಾಣಾ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿರುವುದು ಪುತ್ತೂರಿನ ಶಾಂತಿಪ್ರಿಯ ಜನತೆಗೆ ಮತ್ತೊಮ್ಮೆ ಭರವಸೆ ಮೂಡಿಸಿದೆ.
ಸಮಾಜ ಬಾಹಿರ ಶಕ್ತಿಗಳ ವಿರುದ್ಧ ಹೋರಾಡಿ ಸಮಾಜದಲ್ಲಿ ಶಾಂತಿ–ಸುವ್ಯವಸ್ಥೆ ನೆಲೆಗೊಳಿಸುವುದರೊಂದಿಗೆ ಪೋಲಿಸ್ ಇಲಾಖೆಗೆ ಕೀರ್ತಿ ತಂದ ದಿಟ್ಟೆದೆಯ ಇನ್ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ ಪೋಲಿಸ್ ಇಲಾಖೆಗೆ ಸಂದ ಒಂದು ಶ್ರೇಷ್ಠ ವರದಾನವಾಗಿದ್ದಾರೆ. ಜನತೆಯೊಂದಿಗೆ ನೇರ ಸಂಪರ್ಕ ವಿರಿಸಿಕೊಂಡು ಜನ ಸಾಮಾನ್ಯರ ಕಷ್ಟ ಸುಖಗಳೊಂದಿಗೆ ಸ್ಪಂದಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ತಾನು ಹೋದಲೆಲ್ಲಾ ದಕ್ಷ–ಪ್ರಾಮಾಣಿಕ, ಧೀರ ಅಧಿಕಾರಿಯೆಂಬ ಪ್ರಶಂಸೆಗೆ ಜಾನ್ಸನ್ ಡಿಸೋಜ ಪಾತ್ರರಾಗಿದ್ದಾರೆ. ಇವರು ನಿವೃತ್ತ DYSP ವೆಲೆಂಟಿನ್ ಡಿಸೋಜರವರ ಸಹೋದರರಾಗಿದ್ದಾರೆ.
ಪುತ್ತೂರಿನಂತಹ ವಿವಾದಾತ್ಮಕ ನಾಡಿನಲ್ಲಿ ಎಲ್ಲಾ ರೀತಿಯ ಗೂಂಡಾಗಿರಿ, ಪುಂಡಾಟಿಕೆ ಮತೀಯ ವೈಷಮ್ಯ ಅಕ್ರಮ ದಂಧೆಗಳಂತಹ ಸಮಾಜ ಘಾತುಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ ಪುತ್ತೂರನ್ನು ಶಾಂತಿಯ ಬೀಡನ್ನಾಗಿ ಕಟ್ಟುವಲ್ಲಿ ಇನ್ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ ಸನ್ನದ್ದರಾಗಬೇಕಾಗಿದೆ. ಇಲ್ಲಿನ ತುಂಡು ರಾಜಕಾರಣಿಗಳು, ಮಧ್ಯವತಿ೯ಗಳು ಪೋಲಿಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆ ಬೇಯಿಸಲು ಹೊಂಚು ಹಾಕುವವರಿದ್ದಾರೆ. ಇಂತವರ ಯಾವುದೇ ಒತ್ತಡ, ಪ್ರಭಾವ– ಅಮಿಷಗಳಿಗೆ ಬಲಿಯಾಗದೆ, ಇಂತಹ ದುಷ್ಟ ಮಂದಿಯನ್ನು ಈ ಹಿಂದಿನ ಎಸ್. ಐ.ಗಳಾದ ಆಶೋಕನ್, ಖಾದರ್ ರಂತೆ ಕುಚಿ೯ ಕೊಡದೆ ಹೊರ ದಬ್ಬಿ ಕಾನೂನು ರೀತಿಯ ಕಾರ್ಯವೆಸಗಿದರೆ ಇನ್ಸ್ಪೆಕ್ಟರ್ ಜಾನ್ಸನ್ ಕಿರಣ್ ಡಿಸೋಜ ಪುತ್ತೂರಿನ ತನ್ನ ಸೇವಾವಧಿಯಲ್ಲಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.
ಶೇಖ್ ಇಸಾಕ್, ಸಂಪಾದಕರು–ಕಾಕೋ೯ಟಕ ಸಾಪ್ತಾಹಿಕ, ಪುತ್ತೂರು.