ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಹಾಗೂ ಉಪಮೇಯರ್ ಆಗಿ ಭಾನುಮತಿ ಆಯ್ಕೆ
ಮಂಗಳೂರು ಸಪ್ಟಂಬರ್ 19 : ಮಹಾನಗರ ಪಾಲಿಕೆಯ 25ನೇ ಅವಧಿಗೆ ಮೇಯರ್, ಉಪಮೇಯರ್ ಹಾಗೂ ನಾಲ್ವರು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆಯು ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಮೇಯರ್ ಆಗಿ ದೇರೆಬೈಲ್ ವಾರ್ಡ್‌ನ ಮನೋಜ್ ಕುಮಾರ್ ಹಾಗೂ ಉಪಮೇಯರ್ ಆಗಿ ಬೋಳಾರ್ ವಾರ್ಡ್‌ನ ಭಾನುಮತಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿದ್ದುದರಿಂದ ಮನೋಜ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಪಕ್ಷದಿಂದ ಮನೋಜ್ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅರ್ಹ ಪರಿಶಿಷ್ಟ ಜಾತಿ ಸದಸ್ಯರ ಕೊರತೆಯಿಂದಾಗಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಇದರಿಂದ ಮನೋಜ್ ಕುಮಾರ್ ಅವರು ಅವಿರೋಧವಾಗಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ರಮೇಶ್ ಪ್ರಕಟಿಸಿದರು.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಝೀನತ್ ಶಂಶುದ್ದೀನ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಭಾನುಮತಿ ಪಿ.ಎಸ್. ಮತ್ತು ವನಿತಾ ಪ್ರಸಾದ್ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ಮೂರು ನಾಮನಿರ್ದೇಶನಗಳು ಮಾನ್ಯವೆಂದು ಪರಿಗಣಿಸಲ್ಪಟ್ಟಿದ್ದರೂ, ವನಿತಾ ಪ್ರಸಾದ್ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಂಡಿದ್ದುದರಿಂದ ಭಾನುಮತಿ ಮತ್ತು ಝೀನತ್ ಮಾತ್ರ ಸ್ಪರ್ಧಿಗಳಾಗಿದ್ದರು.
ಬಿಜೆಪಿ ಪಕ್ಷದ 47 ಸದಸ್ಯರು ಭಾನುಮತಿ ಪರವಾಗಿ ಮತ ಚಲಾಯಿಸಿದರೆ, ಕಾಂಗ್ರೆಸ್ ಪಕ್ಷದ 14 ಸದಸ್ಯರು ಝೀನತ್ ಶಂಸುದ್ದೀನ್ ಅವರನ್ನು ಬೆಂಬಲಿಸಿದರು. ಎಸ್‌ಡಿಪಿಐ ಸದಸ್ಯರೊಬ್ಬರು ಮತದಾನದಿಂದ ದೂರ ಉಳಿದರು. ಹೆಚ್ಚಿನ ಮತಗಳಿಂದ ಭಾನುಮತಿ ವಿಜಯಿಯಾಗಿ ಉಪಮೇಯರ್ ಆಗಿ ಆಯ್ಕೆಯಾದರು.