ಶಾಲೆಯಲ್ಲಿ ಶಿಕ್ಷಕಿಯ ಮಗನ ಮದುವೆ – ನೀರಿನ ಯಂತ್ರ ಅಳವಡಿಸಲು ಶಿಕ್ಷಕಿಗೆ ಹೈಕೋರ್ಟ್ ಸೂಚನೆ
ಸರ್ಕಾರಿ ಶಾಲೆಯ ಆವರಣದಲ್ಲಿ ಶಿಕ್ಷಕಿಯು ತನ್ನ ಮಗನ ಮದುವೆಯನ್ನು ಆಯೋಜಿಸಿದ್ದರು. ಆ ಶಿಕ್ಷಕಿಗೆ ವಿಚಿತ್ರ ಶಿಕ್ಷೆಯನ್ನು ನೀಡುವ ಮೂಲಕ ಹಿಮಾಚಲ ಪ್ರದೇಶ ಹೈಕೋರ್ಟ್ ಗಮನ ಸೆಳೆದಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಶಿಕ್ಷಕಿಗೆ ನಾಲ್ಕು ವಾರಗಳ ಒಳಗೆ ಶಾಲೆಯಲ್ಲಿ ಎರಡು ನೀರಿನ ಶುದ್ಧೀಕರಣ ಯಂತ್ರ ಅಳವಡಿಸಲು ಹೈಕೋರ್ಟ್ ಸೂಚಿಸಿದೆ.
ಹಿಮಾಚಲ ಪ್ರದೇಶ ಹೈಕೋರ್ಟ್‌ನ ಅಜಯ ಮೋಹನ್ ಗೋಯಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಸುಲ್ಗಾಂವ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಮಗನ ವಿವಾಹವನ್ನು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಮುಖ್ಯ ಶಿಕ್ಷಕಿ ಸಹಿತ ಎಲ್ಲ ಶಿಕಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಈ ಮದುವೆ ಸಮಾರಂಭದ ಬಗ್ಗೆ ಶಶಿಕಾಂತ್ ಎಂಬವರು ಶಿಕ್ಷಣ ಇಲಾಖೆಗೆ ಇ ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರು.
ಶಿಕ್ಷಣ ಇಲಾಖೆ ಅಧಿಕಾರಿಗಳು ತಪಾಸಣೆಗಾಗಿ ಶಾಲೆಗೆ ಭೇಟಿ ನೀಡಿದ್ದು, ಮದುವೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಆದರೆ, ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಈ ಘಟನೆ ಮತ್ತು ನಡೆಸಿದ ತನಿಖೆಯ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಪಡೆದ ಶಶಿಕಾಂತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹಿಮಾಚಲ ಹೈಕೋರ್ಟ್, ಶಿಕ್ಷಕಿ ತಪ್ಪೊಪ್ಪಿಕೊಂಡರೂ ಎರಡು ಶುದ್ಧ ನೀರಿನ ಯಂತ್ರವನ್ನು ಅಳವಡಿಸುವಂತೆ ಸೂಚನೆ ನೀಡಿದ್ದು, ಆದೇಶವನ್ನು ನಾಲ್ಕು ವಾರಗಳಲ್ಲಿ ಪಾಲಿಸಿ ಹೈಕೋರ್ಟ್ ಕಚೇರಿಗೆ ವರದಿ ನೀಡುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿತು. ಈ ಆದೇಶದಿಂದ ಶಾಲೆಯಲ್ಲಿ ತಪ್ಪು ಮಾಡುವ ಅಧ್ಯಾಪಕ ವೃಂದದವರಿಗೆ ಪಾಠವಾಗಿದೆ.