ಸಹೋದರನನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ
ವಿಟ್ಲ : ಕನ್ಯಾನ ಗ್ರಾಮದ ನಂದರ ಬೆಟ್ಟು ಎಂಬಲ್ಲಿ 2022ರ ಮೇ 11 ರಂದು ಬಾಳಪ್ಪ ನಾಯ್ಕ ಮತ್ತು ಐತ್ತಪ್ಪ ನಾಯ್ಕ ಎಂಬ ಸಹೋದರರಿಗೆ ಯಾವುದೋ ವಿಷಯದಿಂದ ಮಾತಿಗೆ ಮಾತು ಬೆಳೆದು ಐತ್ತಪ್ಪ ನಾಯ್ಕ ತನ್ನ ತಮ್ಮ ಬಾಳಪ್ಪ ನಾಯ್ಕನನ್ನು ತಲೆಗೆ ಹಾಗೂ ಇತರ ಭಾಗಗಳಿಗೆ ಮರದ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು.
ಪ್ರಕರಣ ತನಿಖಾಧಿಕಾರಿ ನಾಗರಾಜ್ ಹೆಚ್.ಇ. ಅವರ ನೇತೃತ್ವದಲ್ಲಿ ತನಿಖೆಯನ್ನು ನಡೆಸಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ 2022 ಜುಲಾಯ್ 7ರಂದು ನ್ಯಾಯಾಲಯಕ್ಕೆ ಆರೋಪಿತರ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಸಾಕ್ಷಿದಾರರನ್ನು ಸೂಕ್ತ ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣವನ್ನು ಶಿಕ್ಷೆಯಾಗುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ ಅವರು ಪ್ರಕರಣದ ಬಗ್ಗೆ ವಾದವನ್ನು ಮಂಡಿಸಿದ್ದರು. ಮಂಗಳೂರು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುನೀತಾ ಎಸ್.ಜಿ. ಅವರು ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.