ವಿಶ್ವ ದಾಖಲೆಯ ಪುಟ ಸೇರಿದ ಲೆಜೆಂಡ್ ಡೈರೆಕ್ಟರ್ ಚಿತ್ರ
ಕತ್ರಿಗುಪ್ಪೆಯಲ್ಲಿರುವ ಪ್ರಯೋಗ್ ಸ್ಟುಡಿಯೋದಲ್ಲಿ ಸಪ್ಟಂಬರ್ 15ರಂದು ಲೆಜೆಂಡ್ ಡೈರೆಕ್ಟರ್ ಚಿತ್ರ ತಂಡದವರು ವಿಶ್ವ ದಾಖಲೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಆಯೋಜಿಸಿದ್ದರು. ನವಿಲುಗರಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ನವಿಲುಗರಿ ನವೀನ್ ನಿರ್ಮಾಪಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಟರಾಗಿ ಕೂಡಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶಾಲ ಸತೀಶ್ ಸಹ ನಿರ್ಮಾಪಕರಾಗಿ ಹಾಗೂ ಪ್ರಣವ್ ಸತೀಶ್ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
ಈ ಚಿತ್ರವು “ಹೈ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಸ್ಥಾನ ಪಡೆದಿದೆ. ಇದರ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಪ್ರಣವ್ ಸತೀಶ್ ಚಿಕ್ಕಂದಿನಲ್ಲಿ ಅಸಾಧ್ಯ ಚುರುಕುತನದ, ತೀವ್ರ ಚಟುವಟಿಕೆಯ ಮಗುವಾಗಿ, “ಹೈಪರ್ ಆಕ್ಟಿವ್” “ವಿಶೇಷ ಮಗು” ಎನಿಸಿಕೊಂಡಿದ್ದು ಈಗ “ಲೆಜೆಂಡ್ ಡೈರೆಕ್ಟರ್” ಚಲನಚಿತ್ರಕ್ಕೆ ಇಂಡಿಪೆಂಡೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇವರು 500ಕ್ಕೂ ಹೆಚ್ಚು ಸ್ಟೇಜ್ ಪ್ರೋಗ್ರಾಮ್ ಗಳನ್ನು ನೀಡಿದ್ದಾರೆ ಹಾಗೂ 200 ಕ್ಕೂ ಹೆಚ್ಚು ಆಲ್ಬಮ್ ಸಾಂಗ್ ಗಳನ್ನು ಬೇರೆ ಬೇರೆ ಮ್ಯೂಸಿಕ್ ಡೈರೆಕ್ಟರ್ ಗಳ ಬಳಿ ಅವರ ಅಭಿರುಚಿಗೆ ತಕ್ಕಂತೆ ಮಾಡಿ ಕೊಟ್ಟಿದ್ದಾರೆ. ಅವರ ಗುರುಗಳಾದ ಆರ್.ಎಸ್. ಗಣೇಶ್ ನಾರಾಯಣ್ ಜೊತೆಗೆ ಕಿರು ಚಿತ್ರಗಳು ಮತ್ತು ಹತ್ತಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಸ್ವತಂತ್ರವಾಗಿ ಸುಮಾರು ಕಿರುಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿ, ಬೇರೆ ಬೇರೆ ಟಿವಿ ವಾಹಿನಿಗಳಿಗೆ ಡಾಕ್ಯುಮೆಂಟರಿ ಮ್ಯೂಸಿಕ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ ಹಾಗೂ ಈ ಚಲನಚಿತ್ರಕ್ಕೆ ಮೊದಲ ಬಾರಿಗೆ ಇಂಡಿಪೆಂಡೆಂಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವುದಕ್ಕೆ ಸಂದ ಗೌರವ ಈ ರೆಕಾರ್ಡ್ ಆಗಿದೆ. ಲೆಜೆಂಡ್ ಡೈರೆಕ್ಟರ್ ಚಿತ್ರದಲ್ಲಿ ಕೆಲಸ ಮಾಡಿರುವ ಕೆಲವು ನಟ, ನಟಿಯರು ಮತ್ತು ತಂತ್ರಜ್ಞರಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಿ. ಶೇಷಾದ್ರಿ – ಅಂತರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು, ಬಿ. ರಾಮಮೂರ್ತಿ – ಹೆಸರಾಂತ ಸಿನಿಮಾ ನಿರ್ದೇಶಕರು, ಗಂಡಸಿ ಸದಾನಂದ ಸ್ವಾಮಿ – ಪತ್ರಕರ್ತರು, ರಮೇಶ್ – ಪ್ರಜಾಶಕ್ತಿ ಜನಪರ ವೇದಿಕೆ ರಾಜ್ಯಾಧ್ಯಕ್ಷರು, ಜಿ.ವೈ. ಪದ್ಮ ನಾಗರಾಜು – ಇಂದು ಸಂಜೆ ಪತ್ರಿಕೆ ಸಂಪಾದಕರು, ಪ್ರೊ. ಸಮತಾ ದೇಶಮಾನೆ ಮುಂತಾದವರು ಭಾಗಿಯಾಗಿದ್ದರು ಎಂದು ಚಿತ್ರ ತಂಡದವರು ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ MRCS ಲಂಡನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾಕ್ಟರ್ ನಿರಂಜನ್ ಪಿ.ಬಿ.ರವರನ್ನು ಸನ್ಮಾನಿಸಲಾಯಿತು.
ಈ ಚಿತ್ರವು ಮುಂಬೈಯಲ್ಲಿ ಜರುಗಿದ ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಮೋಟಿವೇಷನಲ್ ಅವಾರ್ಡ್ ನಲ್ಲಿ ಸ್ಪರ್ಧಿಸಿದ್ದು ಎರಡು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಬೆಸ್ಟ್ ಡೈರೆಕ್ಟರ್ ಆಗಿ ನವಿಲುಗರಿ ನವೀನ್ ಪಿ.ಬಿ. ಇವರಿಗೆ ಲಭಿಸಿದರೆ, ಮೊದಲ ಸಿನಿಮಾಗೆ ಉತ್ತಮ ಸಂಗೀತ ನೀಡಿರುವುದಕ್ಕೆ ಪ್ರಣವ್ ಸತೀಶ್ ಅವರಿಗೆ ಚೊಚ್ಚಲ ಸಂಗೀತ ನಿರ್ದೇಶಕ ಎಂಬ ಪ್ರಶಸ್ತಿ ಲಭಿಸಿದೆ.
ಇನ್ನೂ ಅನೇಕ ಅಂತರ್ ರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಈ ಮಲ್ಟಿ ಸ್ಟಾರ್ ಸಿನಿಮಾ ಸ್ಪರ್ದಿಸುತ್ತಿದ್ದು, ಇದೇ ಅಕ್ಟೋಬರ್ ತಿಂಗಳಿನಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ.