ಕರ್ನಾಟಕದಲ್ಲಿ ಶಾಲೆಗಳಿಗೆ ದಸರಾ ರಜೆ ಘೋಷಣೆ
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಇಡೀ ಕರ್ನಾಟಕ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಅಕ್ಟೋಬರ್ 3ರಿಂದ 20ರ ತನಕ ಅಂದರೆ 17 ದಿನಗಳ ಕಾಲ ದಸರಾ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಎಪ್ರಿಲ್ 10ರ ತನಕ ನಡೆಯಲಿದೆ. 2024-25ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ. ಈಗ ದಸರಾ ರಜೆ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಕೇವಲ 11 ದಿನಗಳು ತರಗತಿಗಳು ನಡೆಯಲಿವೆ.
ಮತ್ತೊಂದೆಡೆ, ದೀಪಾವಳಿ ಅಕ್ಟೋಬರ್ 31ರಂದು ಬರುವುದರಿಂದ, ಆ ದಿನ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 13 ದಿನ ರಜೆ ಇರುವ ಸಾಧ್ಯತೆ ಇದೆ. ಡಿಸೆಂಬರ್ 22ರಿಂದ 29ರ ತನಕ ಕ್ರಿಸ್ಮಸ್ ರಜೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷವು ಮೇ 29ರಿಂದ ಪ್ರಾರಂಭವಾಯಿತು. ಮೊದಲ ಅವಧಿಯು ಅಕ್ಟೋಬರ್ 2ರ ತನಕ ಇರಲಿದೆ. ಸಪ್ಟಂಬರ್ 23ರಿಂದ ಮಧ್ಯಂತರ ಪರೀಕ್ಷೆಗಳು ಪ್ರಾರಂಭವಾಗಿ ಸಪ್ಟಂಬರ್ 30ರ ತನಕ ನಡೆಯಲಿವೆ. ಆ ಬಳಿಕ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಾರಂಭವಾಗಲಿದೆ. ಅಕ್ಟೋಬರ್ 2ರಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಿಸಿದ ಮರು ದಿನದಿಂದ ಶಾಲಾ ಮಕ್ಕಳಿಗೆ ರಜೆ ಸಿಗಲಿದೆ.