ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ – ಅಪಘಾತದಲ್ಲಿ ಗಾಯಗೊಂಡವರಿಗೆ ರೂಪಾಯಿ 1.5 ಲಕ್ಷದವರೆಗೆ ಉಚಿತ ಚಿಕಿತ್ಸೆ
ದೇಶದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ದಿನನಿತ್ಯ ಸಾವು-ನೋವು ಸಂಭವಿಸುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಆದರೆ ಇಂತಹ ಘಟನೆಗಳು ಎದುರಾದಾಗ ಕುಟುಂಬಗಳು ಖರ್ಚು ಮಾಡಲು ಹಣವಿಲ್ಲದೆ ಕಣ್ಣೀರಿನಲ್ಲಿ ಮುಳುಗುತ್ತವೆ. ಆದರೆ ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ರೂಪಾಯಿ 1.5 ಲಕ್ಷ ತನಕ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಸದ್ಯದಲ್ಲೇ ದೇಶಾದ್ಯಂತ ಉಚಿತ ಚಿಕಿತ್ಸೆಯ ಯೋಜನೆ ಜಾರಿ ಬರಲಿದೆ. ರಸ್ತೆ ಅಪಘಾತದ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ಯೋಜನೆ ಜಾರಿಗೊಳ್ಳಲಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಲಿದೆ. ಅಪಘಾತವಾದ ದಿನದಿಂದ 7 ದಿನಗಳವರೆಗೂ 1.5 ಲಕ್ಷ ರೂಪಾಯಿವರೆಗೂ ಉಚಿತ ಚಿಕಿತ್ಸೆ ಸಿಗಲಿದೆ.
ನ್ಯಾಷನಲ್ ಹೆಲ್ತ್ ಅಥಾರಿಟಿ ಹಾಗೂ ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಹಯೋಗದಲ್ಲಿ ಈ ಯೋಜನೆ ಜಾರಿ ಬರಲಿದೆ. ಅಪಘಾತದ ಗಾಯಾಳುಗಳಿಗೆ ಕ್ಯಾಶ್ ಲೆಸ್ ಚಿಕಿತ್ಸೆ ಸಿಗಲಿದೆ. ಎಲ್ಲಾ ವಿಧದ ವಾಹನಗಳ ಅಪಘಾತ ಸಂತ್ರಸ್ತರಿಗೆ ಕ್ಯಾಶ್ ಲೆಸ್ ಉಚಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ನ್ಯಾಷನಲ್ ಹೆಲ್ತ್ ಅಥಾರಿಟಿಯ ಜಂಟಿ ನಿರ್ದೇಶಕ ಡಾಕ್ಟರ್ ಅಕ್ಷಯ್ ಜೈನ್ ರಿಂದ ಎಲ್ಲ ರಾಜ್ಯಗಳಿಗೂ ಪತ್ರ ಬರೆದು ಸೂಚನೆ ನೀಡಿದ್ದಾರೆ. ಅಪಘಾತ ಸಂತ್ರಸ್ತರ ಐ.ಡಿ. ಮೂಲಕ ಉಚಿತ ಚಿಕಿತ್ಸೆ ಸಿಗಲಿದೆ. ಅಪಘಾತದಲ್ಲಿ ಗಾಯಗೊಂಡ ಭಾರತದ ಎಲ್ಲ ನಾಗರಿಕರು, ಎನ್‌ಆರ್‌ಐ ಹಾಗೂ ವಿದೇಶಿಯರಿಗೂ ಉಚಿತ ಚಿಕಿತ್ಸೆ ಸಿಗಲಿದೆ ಎಂದು ವರದಿಯಾಗಿದೆ.