ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವವನ್ನು ಹಂಚುವ ಕಾರ್ಯದಲ್ಲಿ ಸದಾ ಕಾರ್ಯನಿರತರಾಗುತ್ತೇವೆ – ಬಾಲಕೃಷ್ಣ ಆಳ್ವ ಕೊಡಾಜೆ

ಬಂಟ್ವಾಳ : ಭವ್ಯ ಭಾರತದ ಜಾತ್ಯಾತೀತ ಪರಂಪರೆಯ ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಭ್ರಾತೃತ್ವವನ್ನು ಹಂಚುವ ಕಾರ್ಯವನ್ನು ನಾವು ಮಾಡಿದ್ದೇವೆ. ಇದಕ್ಕೆ ಪ್ರತಿಯಾಗಿ ನಮಗೆ ಪ್ರಶಂಸೆಯ ಜೊತೆಗೆ ಟೀಕೆಗಳೂ ಬಂದಿದೆ ಆದರೆ ಯಾವುದೇ ರೀತಿಯ ಟೀಕೆಗಳಿಗೆ ಕಿವಿಗೊಡದೆ ನಾವು ಸಮಾಜವನ್ನು ಕಟ್ಟುವ ಕೆಲಸದಲ್ಲಿ ಸದಾ ಕಾರ್ಯನಿರತರಾಗಿರುತ್ತೇವೆ ಎಂದು ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು.
ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪರಸ್ಪರ ಸಿಹಿ ತಿಂಡಿ ಹಂಚುವ ಜೊತೆಗೆ ಪ್ರೀತಿಯನ್ನು ಹಂಚುವ ಮೂಲಕ ಸೌಹಾರ್ದ ಮೆರೆದ ಕೊಡಾಜೆಯ ಐಕ್ಯ ಹಾಗೂ ಭಾವೈಕ್ಯ ವೇದಿಕೆಯವರಿಗೆ ಸೈಫ್ ಸುಲ್ತಾನ್ ಮಂಗಳೂರು, ಮುನಾಫಿಲ್ ಜೆಪ್ಪು, ಹಬೀಬುರ್ರಹ್ಮಾನ್, ಇಮ್ತಿಯಾಜ್ ಪುತ್ತೂರು ಹಾಗೂ ಆರಿಫ್ ಪುತ್ತೂರು ಇವರ ನೇತೃತ್ವದ ತಂಡವು ದ.ಕ.ಜಿಲ್ಲೆಯ ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಅವರ ಕೊಡಾಜೆಯ ನಿವಾಸದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಸೈಫ್ ಸುಲ್ತಾನ್ ಅವರು ಮಾತನಾಡಿ, ಇಂದಿನ ಕಾಲಘಟ್ಟದ ಬೇಡಿಕೆಯಾಗಿರುವ ಶಾಂತಿ, ಐಕ್ಯತೆ, ಸೌಹಾರ್ದತೆಯನ್ನು ಸಾರುವ ಇಂತಹ ಕಾರ್ಯಕ್ರಮಗಳು ಪ್ರಶಂಸನೀಯ, ಇದನ್ನು ನೆರವೇರಿಸಿಕೊಟ್ಟ ನೀವುಗಳು ಅಭಿನಂದನಾರ್ಹರು, ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ನಡೆಯುವಂತಾಗಲಿ ಎಂದು ಹಾರೈಸಿದರು.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ಮಾತನಾಡಿ, ಇತ್ತೀಚೆಗೆ ಬಂಟ್ವಾಳ ತಾಲೂಕಿನ ಮಾಣಿ, ನೆಟ್ಲಮುಡ್ನೂರು ಹಾಗೂ ಅನಂತಾಡಿ ಗ್ರಾಮದ ಹಿಂದೂ ಬಾಂಧವರು ಸೇರಿ ಭಾವೈಕ್ಯ ವೇದಿಕೆಯ ಮುಖಾಂತರ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಮತ್ತು ಮುಸ್ಲಿಂ ಸಮುದಾಯದ ಯುವಕರು ಐಕ್ಯ ವೇದಿಕೆಯ ವತಿಯಿಂದ ಅನಂತಾಡಿ ಕರಿಂಕದ ಮತ್ತು ನೇರಳಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಗಣೇಶನ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಸಿಹಿ ಹಂಚುವ ಸೌಹಾರ್ದತೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಇವರ ಭ್ರಾತೃತ್ವದ ಕಾರ್ಯಕ್ರಮವನ್ನು ಮೆಚ್ಚಿ ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿರುವುದು ಈ ಊರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಲಯನ್ ಡಾ. ಎ. ಮನೋಹರ ರೈ, ನೇರಳಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ನಿರಂಜನ್ ರೈ, ಮಾತನಾಡಿದರು. ಇದೇ ವೇಳೆ ಕೊಡಾಜೆಯ ಭಾವೈಕ್ಯ ವೇದಿಕೆ ಮತ್ತು ಐಕ್ಯ ವೇದಿಕೆಯ ಸದಸ್ಯರನ್ನು ಅಭಿನಂದಿಸಲಾಯಿತು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ ಕೆ. ಮಾಣಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ ಕೊಪ್ಪರಿಗೆ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್, ಕೋಶಾಧಿಕಾರಿ ರಫೀಕ್ ಹಾಜಿ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತ ಕೋಡಿ, ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ರಹೀಂ ಹಾಜಿ ಸುಲ್ತಾನ್, ನಾರಾಯಣ ಸಾಲ್ಯಾನ್ ಅನಂತಾಡಿ, ವಿಕೇಶ್ ಶೆಟ್ಟಿ ಮಾಣಿ, ಶೀತಲ್ ಗಣೇಶ ನಗರ, ಮೋಹನ್ ಶೆಟ್ಟಿ, ಸತೀಶ್ ಪೂಜಾರಿ ಬಾಯಿಲ, ರವಿಚಂದ್ರ ಅನಂತಾಡಿ, ಸತೀಶ್ ಪೂಜಾರಿ ಬಾಕಿಲ, ಮಹಾಲಿಂಗ ನಾಯ್ಕ, ಶರತ್ ಆಚಾರ್ಯ ಗಣೇಶ ನಗರ, ಮಂಜುನಾಥ್ ಸಾಲ್ಯಾನ್, ಶಂಕರ್ ಅನಂತಾಡಿ, ರಾಜಶೇಖರ್ ಮಾಣಿ, ಐಕ್ಯ ವೇದಿಕೆಯ ಪ್ರಮುಖರಾದ ಫಾರೂಕ್ ಗೋಳಿಕಟ್ಟೆ, ಮನ್ಸೂರ್ ನೇರಳಕಟ್ಟೆ, ರಝಾಕ್ ಗೋಳಿಕಟ್ಟೆ, ಸಲೀಂ ಮಾಣಿ, ನೌಫಳ್ ಕೊಡಾಜೆ, ಇಂಜಿನಿಯರ್ ನವಾಝ್ ನೇರಳಕಟ್ಟೆ, ಹನೀಫ್ ಅನಂತಾಡಿ, ರಫೀಕ್ ಪಂತಡ್ಕ, ಸುಲೈಮಾನ್ ಬಂಟ್ರಿಂಜ ಮೊದಲಾದವರು ಉಪಸ್ಥಿತರಿದ್ದರು.