ಅಕ್ರಮ ಮರಳುಗಾರಿಕೆಯಿಂದ ದ್ವೀಪ ನಾಶ, ಪರಿಸರದ ಜನತೆಯ ಮೂಲಭೂತ ಸೌಕರ್ಯಗಳಿಗೆ ತೊಡಕು, ಪ್ರತಿಭಟನೆಗೆ ವೇದಿಕೆ ಸಜ್ಜು, ಸಪ್ಟಂಬರ್ 27ರಂದು ಬೃಹತ್ ಪ್ರತಿಭಟನೆ
ಮಂಗಳೂರು : ಪಾವುರು ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯಿಗೆ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ದ್ವೀಪ ನಾಶವಾಗುತ್ತಿರುವುದರ ವಿರುದ್ಧ ಸಪ್ಟಂಬರ್ 27ರಂದು ಶುಕ್ರವಾರ ಮಧ್ಯಾಹ್ನ 3:00 ಗಂಟೆಗೆ ಮಂಗಳೂರಿನ ಬಲ್ಮಠ ವೃತ್ತದಿಂದ ಜ್ಯೋತಿ, ಮಿಲಾಗ್ರಿಸ್ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಸಾಗಿ ಕ್ಲಾಕ್ ಟವರ್ ಹತ್ತಿರ ಮಿನಿ ವಿಧಾನಸೌಧದ ಎದುರು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದೆ.
ಉಳ್ಳಾಲ ತಾಲೂಕಿಗೆ ಒಳಪಟ್ಟ ಪಾವೂರು ಉಳಿಯ ದ್ವೀಪದಲ್ಲಿ ಸುಮಾರು 55 ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದು, ಅಲ್ಲಿ ಸುಮಾರು 80 ಎಕರೆ ಸ್ಥಳವಿದ್ದು, ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಮರಳುಗಾರಿಕೆಯನ್ನು ನಡೆಸಿ ಆ ದ್ವೀಪವು ಸುಮಾರು 40 ಎಕ್ರೆಗೆ ಬಂದು ತಲುಪಿರುತ್ತದೆ. ಅಲ್ಲಿಯ ಜನರು ಮೂಲಭೂತ ಸೌಕರ್ಯಗಳಿಗೆ ಕಷ್ಟಪಡುತ್ತಿದ್ದು ರಸ್ತೆ ಹಾಗೂ ಕುಡಿಯಲು ಶುದ್ಧ ನೀರು ಇಲ್ಲದೆ ಒದ್ದಾಡುತ್ತಿದ್ದಾರೆ.
2014ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು, ಉಳಿಯ ಪಾವೂರು ದ್ವೀಪದ ಸುತ್ತಮುತ್ತಲು ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ನಿಷೇಧ ಮಾಡಿಸಿ ಆದೇಶವನ್ನು ಹೊರಡಿಸಿದ್ದರು. ಆದರೆ ಈ ಆದೇಶವನ್ನು ಗಾಳಿಗೆ ತೂರಿ ನಿರಂತರ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಈ ದ್ವೀಪದ ಜನರು ವಾಸಿಸಲು ಭಯಭೀತರಾಗಿರುತ್ತಾರೆ.
ಜಿಲ್ಲಾಡಳಿತಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ಕೊಟ್ಟರೂ ಯಾವುದೇ ಸ್ಪಂದನೆ ಇಲ್ಲ. ರಾಣಿಪುರ ಉಳಿಯ ಕುದ್ರು ಅಕ್ರಮ ಮರಳುಗಾರಿಕೆಯಿಂದಾಗಿ ಇಲ್ಲಿನ ಮನೆಗಳು ಅಪಾಯದಲ್ಲಿವೆ. ಉಳ್ಳಾಲ ಹೊಯ್ಗೆಯ ಜನರು ಕಡುಬಡವರು. ಮೀನು ಹಿಡಿಯುವ ಹಾಗೂ ಚಿಪ್ಪು ಹೆಕ್ಕುವ ವೃತ್ತಿ ನಡೆಸಿ ಜೀವನವನ್ನು ನಡೆಸುತ್ತಿದ್ದಾರೆ. ಈಗ ಅಲ್ಲಿಯ ಜನರ ಗೋಳು ಕೇಳುವವರಿಲ್ಲ. ಆದುದರಿಂದ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಕೊಡಲು ಹಾಗೂ ಅಲ್ಲಿಯ ಜನರಿಗೆ ನ್ಯಾಯ ಒದಗಿಸಿ ಕೊಡುವ ಉದ್ದೇಶದಿಂದ ಆಯೋಜಿಸಲಾದ ಈ ಪ್ರತಿಭಟನೆಗೆ ಎಲ್ಲಾ ಸಮಾನ ಮನಸ್ಕ ಜನರು ಪಕ್ಷ, ಜಾತಿ ಮರೆತು ಒಂದೇ ತಾಯಿಯ ಮಕ್ಕಳಂತೆ ದ್ವೀಪ ಉಳಿಸುವಂತಹ ಆಂದೋಲನಕ್ಕೆ ಕೈ ಜೋಡಿಸಬೇಕು ಎಂದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ, ನಿಕಟ ಪೂರ್ವ ಅಧ್ಯಕ್ಷ ಸ್ಟ್ಯಾನಿ ಲೋಬೊ, ಮಂಗಳೂರು ಧರ್ಮ ಕ್ಷೇತ್ರದ ಪಿ.ಆರ್.ಓ. ರೋಯ್ ಕ್ಯಾಸ್ತೆಲಿನೊ, ಮದರ್ ತೆರೆಜಾ ವಿಚಾರ ವೇದಿಕೆ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಪಾವೂರು ಉಳಿಯ ನಿವಾಸಿ ಗಿಲ್ಪರ್ಟ್ ಡಿಸೋಜ ಮೊದಲಾದವರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.