ಆಸ್ತಿ ನೋಂದಣಿ ಮಾಡುವವರಿಗೆ ಸುವರ್ಣಾವಕಾಶ ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲೂ ಅವಕಾಶ ಕಲ್ಪಿಸಿದ ಸರಕಾರ
ರಾಜ್ಯದಲ್ಲಿ ಅಕ್ಟೋಬರ್ 21ರಿಂದ ಶನಿವಾರ ಮತ್ತು ಭಾನುವಾರದ ರಜೆ ದಿನಗಳಲ್ಲೂ ಉಪ ನೋಂದಣಾಧಿಕಾರಿಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಆಸ್ತಿ ನೋಂದಣಿ, ವರ್ಗಾವಣೆ ಸೇರಿದಂತೆ ಎಲ್ಲ ನೋಂದಣಿಗಳನ್ನು ಈ ದಿನಗಳಲ್ಲೂ ನಿರ್ವಹಿಸಬಹುದು.
ಶನಿವಾರ ಮತ್ತು ಭಾನುವಾರ ನೋಂದಣಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಈ ಹಿಂದಿನಿಂದಲೇ ಇತ್ತು. ಇದರಿಂದ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಹಾಗೂ ಹೊರ ರಾಜ್ಯದಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲವಾಗಲಿದೆ. ಪ್ರತಿ ಜಿಲ್ಲೆಯಲ್ಲಿ ನಾಲ್ಕು ಅಥವಾ ಐದು ಉಪ ನೋಂದಣಿ ಕಚೇರಿಗಳಿದ್ದರೆ, ಒಂದು ಕಚೇರಿ ಮಾತ್ರ ಈ ಎರಡು ದಿವಸಗಳಲ್ಲಿ ಕಾರ್ಯನಿರ್ವಹಿಸಲಿವೆ. ರಜಾ ದಿನಗಳಲ್ಲಿ ಕಾರ್ಯನಿರ್ವಹಿಸಿದ ಕಚೇರಿಗಳಿಗೆ ಮಂಗಳವಾರ ರಜೆ ನೀಡಲಾಗುತ್ತದೆ.
ಸ್ವತ್ತು ನೋಂದಾಯಿಸಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗಲೇ ಶನಿವಾರ ಮತ್ತು ಭಾನುವಾರ ನೋಂದಣಿ ಮಾಡಿಸಿಕೊಳ್ಳುವ ನಮೂದನ್ನು ಅರ್ಜಿದಾರನು ಮಾಡಬೇಕಾಗುತ್ತದೆ. ಯಾವ ಕಚೇರಿಗಳು ಶನಿವಾರ ಮತ್ತು ಭಾನುವಾರ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಆನ್‌ಲೈನ್ ಮೂಲಕವೇ ಸಾರ್ವಜನಿಕರಿಗೆ ತಿಳಿಸಲಾಗುವುದು. ಇದಕ್ಕಾಗಿ ಕಾನೂನಿನ ತಿದ್ದುಪಡಿಯನ್ನು ಮಾಡಿ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಒಪ್ಪಿಗೆಯನ್ನೂ ಪಡೆಯಲಾಗಿದೆ. ಇನ್ನು ರಜೆ ದಿನಗಳಲ್ಲೂ ಆಸ್ತಿ ನೋಂದಣಿ ಖಾಸಗಿ ನೌಕರರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ.