ನಾಶದ ಹಾದಿಯಲ್ಲಿ ಪಾವೂರು – ಉಳಿಯ ದ್ವೀಪ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಂಡಾ ಮಂಡಲವಾದ ಕಥೊಲಿಕ್ ಸಭಾ ಸಂಘಟನೆ ಪ್ರತಿಭಟನೆಗೆ ಹರಿದು ಬಂದ ಜನಸಾಗರ
ಮಂಗಳೂರು ಸಪ್ಟಂಬರ್ 27 : ಪಾವುರು ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯಿಗೆ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯಿಂದಾಗಿ ದ್ವೀಪ ನಾಶವಾಗುತ್ತಿರುವುದರ ವಿರುದ್ಧ ಮಂಗಳೂರು ಧರ್ಮಕ್ಷೇತ್ರದ ವಿವಿಧ ಸಂಘಟನೆಗಳು ಕಥೊಲಿಕ್ ಸಭಾ ಮುಂದಾಳತ್ವದಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ರ್‍ಯಾಲಿಗೆ ಜನಸಾಗರವೇ ಹರಿದು ಬಂದಿದೆ.
ಮಂಗಳೂರಿನ ಬಲ್ಮಠ ವೃತ್ತದಿಂದ ಸಾವಿರಾರು ಮಂದಿ ಜ್ಯೋತಿ, ಮಿಲಾಗ್ರಿಸ್ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಐಕ್ಯತಾ ಮೆರವಣಿಗೆಯಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳ ವಿರುದ್ಧ ಹಾಗೂ ನ್ಯಾಯದ ಬೇಡಿಕೆಗಳನ್ನು ಮುಂದಿಟ್ಟು ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂದು ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದರು.
ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತ ಮಾತನಾಡಿ ಅಕ್ರಮ ಮರಳುಗಾರಿಕೆ ಬಗ್ಗೆ ಹಲವು ದೂರುಗಳು ನೀಡಿದರೂ ಹಿಂದಿನ ಜಿಲ್ಲಾಧಿಕಾರಿಯವರು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸುವ ಆದೇಶವನ್ನು ನೀಡಿದ್ದರೂ, ಇದನ್ನು ಲೆಕ್ಕಿಸದೆ ಬಹಿರಂಗವಾಗಿ ಮರಳು ತೆಗೆಯುವ ಕೆಲಸ ದಿನನಿತ್ಯ ನಡೆಯುತ್ತಾ ಇದೆ. ಶಾಸಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ವಿಧಾನ ಸಭಾ ಅಧ್ಯಕ್ಷರಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಅಕ್ರಮ ಮರಳುಗಾರಿಕೆಯನ್ನು ಕೂಡಲೇ ನಿಲ್ಲಿಸುವಂತೆ ಮನವಿಯನ್ನು ನೀಡಲಾಗುವುದು ಎಂದರು.
ಮಂಗಳೂರು ಧರ್ಮಕ್ಷೇತ್ರದ ಪಿ.ಆರ್.ಓ. ರೋಯ್ ಕ್ಯಾಸ್ತೆಲಿನೊ ಮಾತನಾಡಿ ಈ ದ್ವೀಪ ಪ್ರದೇಶದಲ್ಲಿ 55 ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿದ್ದರೂ ಇವರ ಕಾಳಜಿ ವಹಿಸದೇ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟ ಜಿಲ್ಲಾಡಳಿತ ಹಾಗೂ ಗಣಿ ಇಲಾಖೆಯ ನಡೆ ಖಂಡನೀಯ ಎಂದರು.
ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡುವ ಮೂಲಕ ದ್ವೀಪವಾಸಿಗಳ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಗಣಿ ಇಲಾಖೆಯ ಕಾರ್ಯವೈಖರಿಯು ನಾಚಿಕೆಗೇಡು ಎಂದು ಟೀಕಿಸಿದರು.
ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ ಜನರಿಗೆ ರಕ್ಷಣೆ ನೀಡಬೇಕಾದ ಅಧಿಕಾರಿಗಳು ಸಮಾಜಘಾತುಕರ ಜೊತೆ ಶಾಮೀಲಾಗಿ ಜನ ವಿರೋಧಿಗಳಾಗುತ್ತಿದ್ದಾರೆ. ಈ ಕೃತ್ಯವನ್ನು ಎಂದೂ ಸಹಿಸಲು ಸಾಧ್ಯವಿಲ್ಲ. ಪಾವೂರು, ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯಿಗೆ ದ್ವೀಪದ ಜನರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ ಅಕ್ರಮ ಮರಳುಗಾರಿಕೆ ಬಗ್ಗೆ ಮಾತನಾಡಿ ಕಳವಳ ವ್ಯಕ್ತಪಡಿಸಿದರು. ಬಜ್ಪೆ ವಲಯದ ಅಧ್ಯಕ್ಷ ಸಂತೋಷ್ ಡಿಸೋಜ ಮನವಿ ಪತ್ರವನ್ನು ವಾಚಿಸಿದರು. ಐ.ಸಿ.ವೈ.ಯಂ. ಕೇಂದ್ರೀಯ ಅಧ್ಯಕ್ಷ ವಿಲ್ಸನ್ ಸಿಕ್ವೇರ ಪ್ರತಿಭಟನೆಯು ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತಾಪೂರ್ವಕವಾಗಿ ವಂದಿಸಿದರು. ವಂದನೀಯ ಫಾದರ್ ವಿನೋದ್ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.