ದಲಿತ ಚಳುವಳಿಗೆ 50 ರ ಸಂಭ್ರಮ
ಬೆಳ್ತಂಗಡಿ : ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದ್ದು 70ರ ದಶಕದ ಆರಂಭದಲ್ಲಿ ಪ್ರೊ.ಬಿ. ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳುವಳಿಗೆ ಇದೀಗ ಅರ್ಧ ಶತಮಾನ ತುಂಬುತ್ತಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಆಚರಣಾ ಸಮಿತಿಯ ಅಧ್ಯಕ್ಷ ಬಿ.ಕೆ ವಸಂತ ಮಾಹಿತಿ ನೀಡಿದರು.
ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯ ಪಕ್ಷ, ಸಂಘಟನೆಗಳ ಬೇಧವಿವಲ್ಲದೆ ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿಯನ್ನು ಇದಕ್ಕಾಗಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ದಲಿತ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ.
ಬೃಹತ್ ಮೆರವಣಿಗೆ, ಸಮಾವೇಶದ ಮೂಲಕ ಸಂಭ್ರಮಾಚರಣೆ ಜೊತೆಗೆ ತಾಲೂಕಿನಾದ್ಯಂತ ದಲಿತ ಚಳುವಳಿಯನ್ನು ಕಟ್ಟಲು ಶ್ರಮಿಸಿ, ಅಗಲಿ ಹೋದ ಅನೇಕ ಹಿರಿಯ ಚೇತನಗಳ, ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಸ್ಟಿಸ್ ನಾಗ ಮೋಹನ್‌ದಾಸ್, ದೇವನೂರು ಮಹಾದೇವ, ಪುರುಷೋತ್ತಮ ಬಿಳಿಮಲೆ ಸೇರಿದಂತೆ ಹಲವು ಗಣ್ಯರು ಅತಿಥಿಗಳು ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಬಗ್ಗೆ ಪೂರಕ ಮಾಹಿತಿ ನೀಡಿದ ಮಾಧ್ಯಮ ಸಲಹೆಗಾರ ರಘು ಧರ್ಮಸೇನ, ಮೊದಲ ಹಂತದಲ್ಲಿ ಅಕ್ಟೋಬರ್ 20ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂದು 50 ವರ್ಷಗಳ ಹಿಂದೆ ನಾಡಿನ ಸಮಕಾಲೀನ ಪ್ರಗತಿಪರ ಸಮಾನ ಮನಸ್ಕ ಚಿಂತಕರು, ಸಾಹಿತಿಗಳು, ಲೇಖಕರು, ಪತ್ರಕರ್ತರು ಹೋರಾಟಗಾರರು ನಡೆಸಿದ ಚಿಂತನೆಯ ಫಲವೆಂಬಂತೆ ಪ್ರೊ.ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ರಾಜ್ಯದಲ್ಲಿ ಹುಟ್ಟಿಕೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ದಕ್ಷಿಣ ಕನ್ನಡದ ನೆಲದಲ್ಲಿ ಹಾಸನ ಜಿಲ್ಲೆಯವರಾದ ಬಿಲ್ಲವ ಸಮುದಾಯದ ಸೋಮಶೇಖರರವರು ಮಂಗಳೂರಿನಲ್ಲಿ ದಲಿತ ಮಿತ್ರರರನ್ನು ಸಂಘಟಿಸುವ ಮೂಲಕ ಪರಿಚಯಿಸಿದವರಲ್ಲಿ ಮೊದಲಿಗರು ಎಂದು ವಿವರಿಸಿದರು. ಐದು ದಶಕಗಳ ದಲಿತ ಚಳುವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ, ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ.
ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕಿನಲ್ಲಿ ಒಂದು ಚಾರಿತ್ರಿಕ ಕಾರ್ಯಕ್ರಮ ವೊಂದನ್ನು ಆಯೋಜಿಸುತ್ತಿದ್ದೇವೆ ಎಂದು ಅವರು ವಿವರಿಸಿದರು. ದಲಿತ ಚಳುವಳಿಯ ಮೂಲಕ ಪ್ರೊ.ಬಿ. ಕೃಷ್ಣಪ್ಪರವರು ದಲಿತರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಸ್ವಾಭಿಮಾನದ ಕಿಡಿಯನ್ನು ಹಚ್ಚಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಆಳುವವರಿಗೆ ಮತ್ತು ಶೋಷಕ ವರ್ಗಕ್ಕೆ ದಲಿತ ಸಂಘರ್ಷ ಸಮಿತಿಯ ಮೂಲಕ ಸಿಂಹಸ್ವಪ್ನವಾಗಿತ್ತು. ನಾಡಿನ ದಲಿತ ದಮನಿತರಿಗೆ ಧ್ವನಿಯೇ ಇಲ್ಲದ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ದಲಿತರ ಆಶಾಕಿರಣವಾಗಿ ಧೈರ್ಯ ತುಂಬಲು ಸಿಡಿದೆದ್ದ ದಲಿತ ಸಂಘರ್ಷ ಸಮಿತಿಯು ದಮನಿತರ ಎದೆಯಲ್ಲಿ ಸ್ವಾಭಿಮಾನದ ಚಿಲುಮೆಯಾಗಿ ಕೆಚ್ಚೆದೆಯ ನೀಲಿ ಬಾವುಟದೊಂದಿಗೆ ಹೊರ ಹೊಮ್ಮಿರುವುದು ದಲಿತ ಚಳುವಳಿಯ ಹೋರಾಟದ ಹಾದಿಯ ರೋಚಕ ಇತಿಹಾಸ.
ಇಂಥ ದಲಿತ ಚಳುವಳಿ ನಡೆದು ಬಂದ ಅರ್ಧ ಶತಮಾನದ ಚಾರಿತ್ರಿಕ ಹೋರಾಟದ ಹಾದಿಯ ಏಳು-ಬೀಳುಗಳ ಅವಲೋಕನಕ್ಕೆ ಕಾಲ ಸನ್ನಿಹಿತವಾಗಿದೆ. ಐದು ದಶಕಗಳ ದಲಿತ ಚಳುವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ, ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಚಾರಿತ್ರಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು. ಈ ನಿಟ್ಟಿನಲ್ಲಿ ನಡೆಯಲಿರುವ ದಲಿತ ಚಳುವಳಿಯ 50ರ ಸಂಭ್ರಮದ ವಿಚಾರ ಸಂಕಿರಣ ಹಾಗೂ ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ವೈವಿಧ್ಯ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಾಧ್ಯಕ್ಷ ಎಸ್ ಬೇಬಿ ಸುವರ್ಣ ಪೂರಕ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಚೆನ್ನಕೇಶವ, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ನೇಮಿರಾಜ್ ಕಿಲ್ಲೂರು, ಸಂಜೀವ ಆರ್ , ರಮೇಶ್ ಆರ್ , ಉಪಾಧ್ಯಕ್ಷರಾದ ಜಯಾನಂದ ಪಿಲಿಕಲ, ವೆಂಕಣ್ಣ ಕೊಯ್ಯೂರು, ಪಿ.ಕೆ.ರಾಜು ಪಡಂಗಡಿ, ರವಿ ಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗೌರವ ಸಲಹೆಗಾರರಾದ ಎನ್.ಸಿ. ಸಂಜೀವ್ ನೆರಿಯಾ, ಈಶ್ವರ ಬೈರ, ಪದ್ಮನಾಭ ಗರ್ಡಾಡಿ, ಬಾಬು ಎಂ. ಬೆಳಾಲು, ಕಾರ್ಯದರ್ಶಿಗಳಾದ ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ ಮತ್ತು ಲಾಯಿಲ ಶೇಖರ ಉಪಸ್ಥಿತರಿದ್ದರು.