ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘಟನೆಗಳ ಒಕ್ಕೂಟಕ್ಕೆ ವಿಕಲಚೇತನ ನೌಕರರ ಸಂಘ ಸೇರ್ಪಡೆ ; ರಾಜ್ಯಾಧ್ಯಕ್ಷ ಜೀವನ್ ಮಾರ್ಟಿಸ್
ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘಕ್ಕೂ ಸದಸ್ಯ ಸಂಘಟನೆಯಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜೀವನ್ ಸಂತೋಷ್ ಮಾರ್ಟಿಸ್ ತಿಳಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಇವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದ್ದು, ಮನವಿಯನ್ನು ಸ್ವೀಕರಿಸಿದ ಚಂದ್ರಶೇಖರ್ ರವರು ಸದ್ರಿ ಸಂಘಟನೆಯನ್ನು ಒಕ್ಕೂಟದ ಜೊತೆ ವಿಲೀನಗೊಳಿಸಲು ಒಪ್ಪಿಕೊಂಡಿರುತ್ತಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳ ಒಕ್ಕೂಟ ಪ್ರಾಮಾಣಿಕವಾಗಿ ಹಲವು ತಿಂಗಳುಗಳಿಂದ ಶಾಂತಿಯುತ ಹೋರಾಟಗಳನ್ನು ಮಾಡಿಕೊಂಡು ಬಂದಿರುತ್ತದೆ. ನಮ್ಮ ನಾಲ್ಕು ನಿಗಮಗಳ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ತಮ್ಮ ಒಕ್ಕೂಟದಲ್ಲಿ ಸೇರಲು ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳ ಬಳಿ ಚರ್ಚೆ ಮಾಡಿ ಎಲ್ಲರೂ ಸಹ ಒಕ್ಕೂಟದ ಜತೆ ಸೇರಲು ಸಹಮತ ವ್ಯಕ್ತಪಡಿಸಿದ್ದಾರೆ.
ವಿಕಲಚೇತನ ನೌಕರರ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕೂಡಾ ಈ ಸಂಸ್ಥೆಯ ನೌಕರರಾಗಿರುವುದರಿಂದ ಇನ್ನು ಮುಂದೆ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒಕ್ಕೂಟವು ಮಾಡುವ ಎಲ್ಲಾ ರೀತಿಯ ಹೋರಾಟಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿಕಲಚೇತನ ನೌಕರರ ಸಂಘ ಸಕ್ರೀಯವಾಗಿ ಪಾಲ್ಗೊಳ್ಳಲು ಸಿದ್ಧವಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಜೀವನ್ ಸಂತೋಷ್ ಮಾರ್ಟಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.