January 14, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿ   ವ್ಯಾಪ್ತಿಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ

ಕೆಲಸ ಬಲ್ಲವನಿಗೆ ಬದುಕಿಗೆ ಚಿಂತೆ ಇಲ್ಲ. ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಮನುಷ್ಯನ ಜೀವನ ನಿಂತಿದೆ.. ದುಗ್ಗೇ ಗೌಡ

ಬಂಟ್ವಾಳ : ಕೆಲಸ ಬಲ್ಲವನಿಗೆ ಬದುಕಿಗೆ ಚಿಂತೆ ಇಲ್ಲ. ಭಕ್ತಿ ಶ್ರದ್ಧೆ ನಂಬಿಕೆಯಿಂದ ಮನುಷ್ಯನ ಜೀವನ ನಿಂತಿದೆ. ಸೇವೆ ಮತ್ತು ಆರ್ಥಿಕ ಸದೃಢತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಮಂತ್ರ. ಆ ಮೂಲಕ ಪ್ರತೀ ಕುಟುಂಬದಲ್ಲಿ ಆರ್ಥಿಕ ಸುಸ್ಥಿರತೆ ತರುವ ಸಂಕಲ್ಪದೊಂದಿಗೆ ಹಣಕಾಸು ಸಂಸ್ಥೆಯೊಂದಿಗಿನ ಸಂಪರ್ಕ ಸೇತುವಾಗಿ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಹೇಳಿದರು.

ಅವರು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸಪ್ಟಂಬರ್‌ 29ರಂದು ನಡೆದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ಇದರ ವ್ಯಾಪ್ತಿಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಒಕ್ಕೂಟಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ  ಚಿದಾನಂದ ರೈ ಕಕ್ಯ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ ಮಾತನಾಡಿ ಯೋಜನೆಯಲ್ಲಿ ಸೇರಿ ತನ್ನ ಅಗತ್ಯ ಪೂರೈಸಿದ ಮೇಲೆ ಯೋಜನೆಯ ಕಾರ್ಯವನ್ನು ದೂರುವುದು ತಪ್ಪು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಯೋಜನೆಯ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಸದಸ್ಯರಿಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮುದಾಯ ಹಾಗೂ ಸಂಘ ಸದಸ್ಯರಿಗೆ ಆಗುವ ಪ್ರಯೋಜನಗಳ ಬಗ್ಗೆ ಪ್ರಗತಿಬಂದು ಸ್ವ ಸಹಾಯ ಕೇಂದ್ರ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ಎಸ್. ಬಿ.ಐ. ಬ್ಯಾಂಕ್ ಮಲ್ಲಿಕಟ್ಟೆ ಬ್ಯಾಂಕಿನ ಪ್ರದಾನ ವ್ಯವಸ್ಥಾಪಕಿ ಶ್ರೀಮತಿ ಭವಾನಿ, ಸ್ವಸಹಾಯ ಸಂಘಗಳು ಬ್ಯಾಂಕಿಗೆ ನೀಡಬೇಕಾದ ದಾಖಲಾತಿ ಬ್ಯಾಂಕಿನ ಪ್ರತಿನಿಧಿಯಾಗಿ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ವಹಿಸುತ್ತಿರುವ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿ ಇಷ್ಟರ ತನಕ ಬಂಟ್ವಾಳ ಯೋಜನಾ ಕಚೇರಿಯ ವ್ಯಾಪ್ತಿಯ ದಾಖಲೆಯ 2526 ಖಾತೆಗಳನ್ನು ಬ್ಯಾಂಕಿನಲ್ಲಿ ತೆರೆದಿದೆ ಎಂದರು.

ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಯೋಜನೆಯ ದಶಾಂಶಗಳ ಹಾಗೂ ಸ್ವಸಹಾಯ ಸಂಘಗಳ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.  ಎಸ್.ಕೆ.ಡಿ.ಆರ್.ಡಿ.ಪಿ., ಎಂ.ಐ.ಎಸ್. ಯೋಜನಾಧಿಕಾರಿ ಪ್ರೇಮನಾಥ್, ಸಂಘದ ಸಾಲ ಮರುಪಾವತಿ ಬಗ್ಗೆ ಮಾಹಿತಿ ನೀಡಿ, ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ತಾಲೂಕಿನಲ್ಲಿ ಕೈಗೊಳ್ಳಾದ ಸಾಧನಗಳ ಮಾಹಿತಿ ನೀಡಿ, ಯೋಜನೆಯ ಮೂಲಕ ಅನುಷ್ಠಾನ ಕಾರ್ಯಕ್ರಮಗಳ ಜೊತೆಗೆ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕಿನಲ್ಲಿ ಇಷ್ಟರ ತನಕ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂಪಾಯಿ 11 ಕೋಟಿ 98 ಲಕ್ಷ ಅನುದಾನ ನೀಡಲಾಗಿದೆ. 223 ಮಂದಿಗೆ ತಿಂಗಳ ಮಾಶಾಸನ, 410 ಮಂದಿಗೆ ಜಲಮಂಗಲ ಮೂಲಕ ಸಲಕರಣೆ, 46 ಮಂದಿಗೆ ಕ್ರಿಟಿಕಲ್ ಸಹಾಯಧನ ರೂಪಾಯಿ 7 ಲಕ್ಷ 70 ಸಾವಿರ ನೀಡಲಾಗಿದ್ದು, ಈ ವರ್ಷ ಶಾಲೆಗಳಿಗೆ 18 ಜ್ಞಾನದೀಪ ಶಿಕ್ಷಕರನ್ನು, 310 ಮಕ್ಕಳಿಗೆ ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಹಾಗೂ ವಿವಿಧ ಶಾಲೆಗಳಿಗೆ ಒಟ್ಟು 164 ಜೊತೆ ಬೆಂಚ್ ಡೆಸ್ಕ್ ಗಳನ್ನು ನೀಡಲು  ಯೋಜನೆಯಿಂದ ಮಂಜೂರಾಗಿದೆ ಎಂದರು.

ವೇದಿಕೆಯಲ್ಲಿ ವಲಯ ಅಧ್ಯಕ್ಷರುಗಳಾದ ಜನಾರ್ದನ ಆಚಾರ್ಯ, ಲೀಡಿಯಾ ಪಿಂಟೋ, ಗಂಗಾಧರ ಭಂಡಾರಿ, ಜಯಲಕ್ಷ್ಮಿ, ಮನೋಹರ್ ಕುಲಾಲ್, ರಾಧಾಕೃಷ್ಣ ಆಚಾರ್ಯ, ಉಮೇಶ್, ಶೌರ್ಯ ತಂಡದ ಕ್ಯಾಪ್ಟನ್ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯೋಜನೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸುವ ಕಿರು ಚಿತ್ರ ಪ್ರದರ್ಶನ ಮಾಡಲಾಯಿತು. ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಪಾಣೆಮಂಗಳೂರು ವಲಯ ಮೇಲ್ವಿಚಾರಕಿ  ಅಮಿತಾ ವಂದಿಸಿ, ತುಂಬೆ ವಲಯ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು.

ಸಮಾವೇಶದಲ್ಲಿ ಬಂಟ್ವಾಳ  ಯೋಜನಾ ಕಚೇರಿ ವ್ಯಾಪ್ತಿಯ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಕೃಷಿ ಮೇಲ್ವಿಚಾರಕರು, ಕಛೇರಿ ಸಿಬಂದಿಗಳು, ಲೆಕ್ಕ ಪರಿಶೋಧಕರು, ವಲಯ ಮೇಲ್ವಿಚಾರಕರು, ಜ್ಞಾನ ವಿಕಾಸ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ವಿ.ಎಲ್.ಐ.ಗಳು ಭಾಗಿಯಾಗಿದ್ದರು. ಬಂಟ್ವಾಳ ವ್ಯಾಪ್ತಿಯಲ್ಲಿ ಒಟ್ಟು 72 ಒಕ್ಕೂಟಗಳಲ್ಲಿ 2729 ಸ್ವ-ಸಹಾಯ ಸಂಘಗಳು ಇದ್ದು 22386 ಮಂದಿ ಸದಸ್ಯರುಗಳು ಕಾರ್ಯನಿರ್ವಹಿಸುತ್ತಿದ್ದು ಆರ್ಥಿಕ ಜ್ಞಾನ ವೃದ್ಧಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ‌ ಮೂಲಕ ದೇಶದ ಪ್ರಗತಿಯ ಭಾಗವಾಗಿ ಗುರುತಿಸಿಕೊಂಡಿದ್ದಾರೆ.

You may also like

News

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತ್ರತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಬೆಳ್ತಂಗಡಿ : ಉಜಿರೆ ಬೆನಕ ಆಸ್ಪತ್ರೆಗೆ ಜನವರಿ 13ರಂದು ಚಿತ್ತೈಸಿದ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಂಗಳು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ
News

ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಕೇರಳ ಗಡಿನಾಡ ಘಟಕವಾದ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಶಿವರಾಮ ಕಾಸರಗೋಡು ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದು

You cannot copy content of this page