ಬಂಟ್ವಾಳದಲ್ಲಿ ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ವಾಳ : ವಿದ್ಯಾರ್ಥಿಗಳು, ಯುವಸಮಾಜ ಸಿವಿಲ್ ಸರ್ವಿಸ್ ಪರೀಕ್ಷೆಗೆ ಶ್ರಮವಹಿಸಿ ತರಬೇತು ಪಡೆಯುವುದರ ಜೊತೆಗೆ ಅದರಲ್ಲಿ ತೇರ್ಗಡೆ ಹೊಂದಿ ದೇಶದ ಉನ್ನತ ಹುದ್ದೆಯಲ್ಲಿ ಕಾಣುವಂತಾಗಬೇಕು. ಯುವಸಂಪತ್ತು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ದಾಯ್ಜಿವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಹೇಳಿದರು. ಅವರು ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್, ಆಜೀವ ಸದಸ್ಯ ಡಿ.ಪಿ. ಸಿದ್ದೀಕ್ ಹಾಜಿ, ಮಾಜಿ ಜಿಲ್ಲಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, ಸುಳ್ಯ ಘಟಕದ ಅಧ್ಯಕ್ಷ ಅಬೂಬಕರ್ ಪಾರೆಕ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಅಕ್ಷರ ದಾಸೋಹಕ್ಕೆ ಉಚಿತವಾಗಿ ತರಕಾರಿ ವಿತರಿಸುತ್ತಿರುವ ಶರೀಫ್ ಮೆಲ್ಕಾರ್ ಅವರನ್ನು ಗಾಂಧಿ ಜಯಂತಿ ಪ್ರಯುಕ್ತ ಸನ್ಮಾನಿಸಲಾಯಿತು. ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ 13 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಾಲೂಕಿನ 51 ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಜಮೀಯ್ಯತುಲ್ ಫಲಾಹ್ ಸದಸ್ಯರ ಆಡಳಿತದ ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ಮತ್ತು ರಝಾನಗರದ ಬುರೂಜ್ ಪಬ್ಲಿಕ್ ಸ್ಕೂಲ್ ಕಳೆದ ಸಾಲಿನಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದ್ದು, ಆ ಶಾಲೆಗಳನ್ನು ಗೌರವ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಮೊದಲು ನಿವೃತ್ತ ಶಿಕ್ಷಕ ಬಿ.ಎಂ. ತುಂಬೆ ಅವರಿಂದ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ ನೆರವೇರಿತು. ಉಪಾಧ್ಯಕ್ಷ ಶೇಖ್ ರಹ್ಮತುಲ್ಲಾ ಸ್ವಾಗತಿಸಿ, ಆಶಿಕ್ ಕುಕ್ಕಾಜೆ ಕಿರಾಅತ್ ಪಠಿಸಿದರು. ನೋಟರಿ ಅಬೂಬಕರ್ ವಿಟ್ಲ ವಿದ್ಯಾರ್ಥಿ ವೇತನ ಪಟ್ಟಿ ವಾಚಿಸಿದರು. ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ವಂದಿಸಿದರು. ಹಕೀಂ ಕಲಾಯಿ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್ ನಾರಂಕೋಡಿ, ಉಬೈದ್ ವಿಟ್ಲ, ಹರ್ಷದ್ ಸರವು, ಟಿ.ಕೆ. ಮಹಮ್ಮದ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.