ಮುಡಿಪು ಸೈಂಟ್ ಜೋಸೆಫ್ ವಾಜ್ ಚರ್ಚ್ ನಲ್ಲಿ ಕಳ್ಳತನ

ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕಿನ ಮುಡಿಪುವಿನಲ್ಲಿರುವ ಸಂತ ಜೋಸೆಫ್ ವಾಜ್ ಚರ್ಚ್ ಗೆ ಜನವರಿ 24ರಂದು ರಾತ್ರಿ ಕಳ್ಳನೋರ್ವ ಚರ್ಚ್ ಬಾಗಿಲನ್ನು ಮುರಿದು ಒಳ ನುಗ್ಗಿ ಬಲಿಪೀಠದಲ್ಲಿರುವ ಪರಮ ಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮ ಪ್ರಸಾದ ಹಂಚುವ ವಸ್ತುಗಳನ್ನು ಕಳವು ಗೈದಿದ್ದು ಮಾತ್ರವಲ್ಲದೆ ಕಾಣಿಕೆಗೆ ಹಾಕಿರುವ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಕಳ್ಳತನ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಚರ್ಚ್ ಉಪಾಧ್ಯಕ್ಷ ನವೀನ್ ಡಿಸೋಜ, ಕಾರ್ಯದರ್ಶಿ ಸಂತೋಷ್ ಡಿಸೋಜ, ಪಾಲನಾ ಸಮಿತಿ ಸದಸ್ಯರು, ಕಥೊಲಿಕ್ ಸಭಾ ಮುಡಿಪು ಘಟಕದ ಅಧ್ಯಕ್ಷ ರಜತ್ ವೇಗಸ್, ರಾಜಕೀಯ ಮುಂದಾಳು ಅರುಣ್ ಡಿಸೋಜ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರಿಗೆ ಕಳ್ಳತನದ ಬಗ್ಗೆ ವಿವರಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಘಟನೆ ಬಗ್ಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಕಳ್ಳನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.