ಮಂಗಳೂರು ಗಣಿ ಇಲಾಖೆ ಉಪನಿರ್ದೇಶಕರ ಲಂಚ ಸ್ವೀಕಾರ – ರೆಡ್ ಹ್ಯಾಂಡ್ ಆಗಿ ಬಲೆಗೆ
ಅಧಿಕಾರಿ ಕೃಷ್ಣವೇಣಿ ಹಾಗೂ ಸಿಬ್ಬಂದಿ ಲೋಕಾಯುಕ್ತ ಪೊಲೀಸ್ ವಶಕ್ಕೆ

ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೇ ನಂಬರ್ 279/5 ರಲ್ಲಿನ 35 ಸೆಂಟ್ಸ್ ಪ್ರದೇಶದಲ್ಲಿ ಲಭ್ಯವಿರುವ ಕಟ್ಟಡ ಕಲ್ಲು ತೆಗೆಯಲು ದೃಢೀಕರಣ ಪತ್ರ ನೀಡಬಹುದೆಂದು ಉಳ್ಳಾಲ ತಹಶೀಲ್ದಾರರು ಮಾರ್ಚ್ 21ರಂದು ವರದಿಯನ್ನು ನೀಡಿದ್ದರು. ಈ ವರದಿಯನ್ನು ಉಲ್ಲೇಖಿಸಿ ಮಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಪಿರ್ಯಾದುದಾರರು ಅರ್ಜಿ ಸಲ್ಲಿಸಿದ್ದರೂ ಅವರು ಅನುಮತಿ ನೀಡಿರಲಿಲ್ಲ. ಇದರ ಬಗ್ಗೆ ವಿಚಾರಿಸಲು ಗಣಿ ಇಲಾಖೆ ಕಚೇರಿಗೆ ಪಿರ್ಯಾದುದಾರರು ಮೇ 28ರಂದು ತೆರಳಿದ್ದು, ಮಂಗಳೂರು ಗಣಿ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50 ಸಾವಿರ ರೂಪಾಯಿ ತೆಗೆದುಕೊಳ್ಳಿ, ನಂತರ ಸಹಿ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಪಿರ್ಯಾದುದಾರರ ದೂರಿನಂತೆ ಈ ಬಗ್ಗೆ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿರುತ್ತದೆ.


ಮಂಗಳೂರು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಕೃಷ್ಣವೇಣಿ ಅವರು ತಮ್ಮ ಚಾಲಕ ಮಧುರ ಎಂಬವರ ಮೂಲಕ 50 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆದುದರಿಂದ ಸದರಿ ಅಧಿಕಾರಿಯನ್ನು ಹಾಗೂ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಅಧೀಕ್ಷಕರು (ಪ್ರಭಾರ) ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಇವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕರಾದ ಡಾ. ಗಾನಾ ಪಿ. ಕುಮಾರ್, ಸುರೇಶ್ ಕುಮಾರ್ ಪಿ., ಪೊಲೀಸ್ ಇಲಾಖೆಯ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ ಕೆ.ಎನ್. ಹಾಗೂ ಉಡುಪಿ ಲೋಕಾಯುಕ್ತ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ್ ರವರು ಮಂಗಳೂರು ಹಾಗೂ ಉಡುಪಿ ಲೋಕಾಯುಕ್ತ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.



