ಮಾಣಿ ಗ್ರಾಮದ ಸರಕಾರಿ ಜಮೀನಿನಲ್ಲಿ ಅನಧಿಕೃತ ಐಶಾರಾಮಿ ಬಂಗ್ಲೆ ನಿರ್ಮಾಣ – ತನಿಖೆ ನಡೆಸಲು ಜಿಲ್ಲಾಧಿಕಾರಿ ಖಡಕ್ ಆದೇಶ
“ಕರಾವಳಿ ಸುದ್ದಿ” ಪತ್ರಿಕೆಯ ವರದಿಯ ಫಲಶ್ರುತಿ

ಮಾಣಿ ಗ್ರಾಮದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕಟ್ಟಡದ ಕುರಿತಾಗಿ “ಕರಾವಳಿ ಸುದ್ದಿ” ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿ ಇದೀಗ ಜಿಲ್ಲಾಡಳಿತವನ್ನು ಎಚ್ಚರಿಸಿದೆ.

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸರಕಾರಿ ಜಮೀನಿಗೆ ಸಂಬಂಧಿಸಿದ ಸರ್ವೇ ನಂಬರ್ 135ರಲ್ಲಿ ಲೂಸಿಯಾ ಮೆಟ್ಟಿಲ್ಡಾ ಪಿಂಟೋ ಎಂಬವರು ತನ್ನ ಹೆಸರಿನಲ್ಲಿ RTC, ಕನ್ವರ್ಷನ್, 9/11 ಇಲ್ಲದೆ ಹಾಗೂ ಕಟ್ಟಡವನ್ನು ನಿರ್ಮಿಸಲು ಪಂಚಾಯತ್ ಕಚೇರಿಯಿಂದ ಪರವಾನಿಗೆಯನ್ನೂ ಪಡೆಯದೆ ಅಕ್ರಮ ಹಾಗೂ ಅನಧಿಕೃತವಾಗಿ ಐಷಾರಾಮಿ ಬಂಗಲೆ ನಿರ್ಮಿಸಿದ ಬಗ್ಗೆ “ಕರಾವಳಿ ಸುದ್ದಿ” ಪತ್ರಿಕೆಯಲ್ಲಿ ಮೇ 26ರಂದು ಸೋಮವಾರ ‘ಮಾಣಿ ಗ್ರಾಮದಲ್ಲಿ ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು’ ಎಂಬ ವರದಿ ಪ್ರಕಟವಾಗಿತ್ತು. ಸರಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಅನಧಿಕೃತ ಕಟ್ಟಡಗಳು ಯಾವುದೇ ಇರಲಿ ನೆಲಸಮಗೊಳಿಸುವಂತೆ ಪಂಚಾಯತ್ ರಾಜ್ ನಿರ್ದೇಶಕರು ಕಳೆದ ಮೇ 13ರಂದು ಸುತ್ತೋಲೆಯನ್ನು ಹೊರಡಿಸಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಣಿ ಗ್ರಾಮದ ಅಕ್ರಮ ಕಟ್ಟಡದ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಕುರಿತು ಕರಾವಳಿ ಸುದ್ದಿ ಪತ್ರಿಕೆಯಲ್ಲಿ ಸಚಿತ್ರ ವರದಿ ಪ್ರಕಟವಾಗಿದ್ದು, ಸೂಕ್ತ ಕಾನೂನು ಕ್ರಮ ಜರಗಿಸಲು ಪತ್ರಿಕೆಯಲ್ಲಿ ಬಹಿರಂಗ ಪಡಿಸಲಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ದಸ್ತಾವೇಜುಗಳನ್ನು ಪರಿಶೀಲಿಸಿ, ಈ ಅಕ್ರಮ ಹಾಗೂ ಅನಧಿಕೃತ ಕಟ್ಟಡದ ಬಗ್ಗೆ ಸೂಕ್ತ ತನಿಖೆ ನಡೆಸಲು, ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ‘ಪ್ರತ್ಯುತ್ತರ’ ನೀಡಲು ಬಂಟ್ವಾಳ ತಹಶೀಲ್ದಾರರಿಗೆ ಆದೇಶ ನೀಡಿದ್ದಾರೆ.




