ಜುಲೈ 1ರಿಂದ ರೈಲ್ವೆ ಟಿಕೆಟ್ ದರ ಏರಿಕೆ – ಮಾಸಿಕ ಪಾಸ್ ದರದಲ್ಲಿ ಯಥಾಸ್ಥಿತಿ
ರೈಲ್ವೆ ಇಲಾಖೆ ಪ್ರಸ್ತಾವನೆ – ವೆಚ್ಚ ನಿರ್ವಹಣೆಗಾಗಿ ಈ ಕ್ರಮ

ಜುಲೈ 1 ರಿಂದ ಸುಮಾರು 13,000 ದೈನಂದಿನ ಎಸಿ ಅಲ್ಲದ ಮೇಲ್ ಮತ್ತು ಎಕ್ಸ್’ಪ್ರೆಸ್ ರೈಲುಗಳ ಪ್ರಯಾಣ ದರದಲ್ಲಿ ಕಿಲೋಮೀಟರಿಗೆ 1 ಪೈಸೆ ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸುವ ಎಸಿ ವರ್ಗದ ಪ್ರಯಾಣಿಕರಿಗೆ, (ಹವಾನಿಯಂತ್ರಿತ ಟು ಟಯರ್, ತ್ರೀ ಟಯರ್ ಹಾಗೂ ಫಸ್ಟ್ ಕ್ಲಾಸ್ ಎಸಿ) ದರದಲ್ಲಿ ಏರಿಕೆ ಪ್ರತಿ ಕಿಲೋಮೀಟರಿಗೆ 2 ಪೈಸೆ ಇರುತ್ತದೆ ಎಂದು ವರದಿಯಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರೈಲ್ವೆ ಹಲವಾರು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಯಾಣಿಕರ ರೈಲು ದರದಲ್ಲಿ ಅಂತರ ಹಾಗೂ ಕ್ಲಾಸ್ ಆಧಾರದಲ್ಲಿ ಏರಿಕೆ ಮಾಡಲು ಸಜ್ಜಾಗಿದ್ದು, ಪರಿಷ್ಕೃತ ದರಗಳು ಜುಲೈ 1 ರಿಂದ ಜಾರಿಗೆ ಬರಲಿವೆ.

ಸಾಮಾನ್ಯ [ಜನರಲ್] ಎರಡನೇ ದರ್ಜೆಯಲ್ಲಿ 500 ಕಿಲೋ ಮೀಟರ್ ವರೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ದರ ಹೆಚ್ಚಳವಿಲ್ಲ. ಆದಾಗ್ಯೂ, ಸಾಮಾನ್ಯ ಎರಡನೇ ದರ್ಜೆಯಲ್ಲಿ 500 ಕಿಲೋ ಮೀಟರ್ ಮೀರಿದ ಪ್ರಯಾಣಕ್ಕೆ ದರವು ಪ್ರತಿ ಕಿಲೋಮೀಟರ್’ಗೆ ಅರ್ಧ ಪೈಸೆ ಮಾತ್ರ ಹೆಚ್ಚಾಗುತ್ತದೆ. ಉದಾಹರಣೆಗೆ, 600 ಕಿಮೀ ಪ್ರಯಾಣವು ಕೇವಲ 50 ಪೈಸೆಯ ಹೆಚ್ಚಳವನ್ನು ಕಾಣಲಿದೆ. ಇದು ಹೆಚ್ಚಳವೇ ಆದರೂ, ಕನಿಷ್ಠ ಹೊರೆ ಎಂದು ಇಲಾಖೆ ಪರಿಗಣಿಸಿದೆ. ಹೊಸ ದರ ರಚನೆಯು ಪ್ರಯಾಣಿಕರ ಬಜೆಟ್ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಪ್ರತಿ ಕಿಲೋ ಮೀಟರ್ ಗೆ ಅರ್ಧ ಪೈಸೆಯಂತೆ 1,000 ಕಿಲೋ ಮೀಟರ್ ದೂರ ಪ್ರಯಾಣಿಸಿದರೆ ದರವು ಕೇವಲ 2.50 ಪೈಸೆ ಮಾತ್ರ ಹೆಚ್ಚಾಗಲಿದೆ. ಉಪನಗರ ರೈಲು ದರಗಳು ಮತ್ತು ಮಾಸಿಕ ಸೀಸನ್ ಟಿಕೆಟ್ ಬೆಲೆಗಳು ಬದಲಾಗದೆ ಉಳಿಯುತ್ತವೆ. ಇದು ದೈನಂದಿನ ಕಚೇರಿ ಕೆಲಸಕ್ಕೆ ಮತ್ತು ಅಲ್ಲಿಂದ ವಾಪಸ್ ಮನೆಗೆ ಪ್ರಯಾಣಿಸುವ ದೈನಂದಿನ ಪ್ರಯಾಣಿಕರಿಗೆ ನೆಮ್ಮದಿಯನ್ನು ನೀಡಿದೆ.

ರೈಲ್ವೆ ಏಜೆಂಟರು ತಾತ್ಕಾಲ್ ಟಿಕೆಟ್ ಅನ್ನು ದುರುಪಯೋಗಪಡಿಸುವ ಪಡಿಸುವುದನ್ನು ನಿಲ್ಲಿಸಲು ರೈಲ್ವೆ ಸಚಿವಾಲಯವು 2015 ಜೂನ್ 10 ರಂದು ನಿರ್ದೇಶನವನ್ನು ನೀಡಿ ಜುಲೈ 1 ರಿಂದ ತಾತ್ಕಾಲ್ ಟಿಕೆಟ್ ಗಳನ್ನು ಕಾದಿರಿಸಲು ಪ್ರಯಾಣಿಕರು ಆಧಾರ್ ದೃಢೀಕರಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಯಾವುದೇ ಒಂದು ಕಾರಣಕ್ಕಾಗಿ ಕಡೆಯ ಗಳಿಗೆಯಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕಾದವರಿಗೆ ತಾತ್ಕಾಲ್ ಯೋಜನೆಯ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಲು ಭಾರತೀಯ ರೈಲ್ವೆಯು ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಭಾರತೀಯ ರೈಲ್ವೆಯ ಅಧಿಸೂಚನೆಯ ಪ್ರಕಾರ, 2025 ಜುಲೈ 1ರಿಂದ, ತತ್ಕಾಲ್ ಟಿಕೇಟ್’ಗಳು ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಿದ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತವೆ.

ಜುಲೈ 15ರಿಂದ, ಹೆಚ್ಚುವರಿ ಭದ್ರತೆಯನ್ನು ಸೇರಿಸಲಾಗುತ್ತಿದೆ. ಪ್ರಯಾಣಿಕರು ಆಧಾರ್ ಆಧರಿಸಿ ಒಟಿಪಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಬುಕಿಂಗ್ ಸಮಯದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಟಿಕೆಟ್ ಬುಕಿಂಗ್ ಮಾಡಲು ಅದನ್ನು ನಮೂದಿಸಬೇಕು. ಬುಕಿಂಗ್’ಗಳನ್ನು ಅಧಿಕೃತ ಐಆರ್’ಸಿಟಿಸಿ ವೆಬ್’ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಮಾತ್ರ ಮಾಡಬಹುದು.




