ಮೊಗರ್ನಾಡ್ ಚರ್ಚ್ ನ ಹೊಸಾನ್ನಾ ವಲಯದಲ್ಲಿ ಯುವ ಸಂಭ್ರಮಾಚರಣೆ
ಮೊಗರ್ನಾಡ್ ದೇವಮಾತ ಚರ್ಚ್ ನ 250ನೇ ವರ್ಷದ ಜುಬಿಲಿ ಪ್ರಯುಕ್ತ ಚರ್ಚ್ ಗೆ ಒಳಪಟ್ಟ ಹೊಸಾನ್ನ ವಲಯದಲ್ಲಿ ಯುವ ಸಂಭ್ರಮವನ್ನು ಆಗಸ್ಟ್ 17 ರಂದು ಭಾನುವಾರ ಸಂಜೆ 4 ಗಂಟೆಗೆ ಚರ್ಚ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯುವಕರ ಪ್ರಾರ್ಥನಾ ಕೂಟದ ತರವಾಯ ನಡೆದ ಸಭಾ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಸೈಂಟ್ ಮೊನಿಕಾ ಸ್ಕೂಲ್ ಕುಂಬ್ಳಾ ಇದರ ಪ್ರಾಂಶುಪಾಲರಾದ ವಂದನೀಯ ಫಾದರ್ ಸೂರಜ್ ಲೋಬೊರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಇವರು ಮಾತನಾಡಿ “ಪ್ರತಿಯೊಬ್ಬರಲ್ಲಿಯೂ ಅವರದೇ ಆದ ಪ್ರತಿಭೆಗಳಿರುತ್ತವೆ. ಯಾರೂ ತಮ್ಮನ್ನು ಇತರರೊಂದಿಗೆ ಹೋಲಿಸದಿರಿ. ಕಷ್ಟ ಅವಮಾನಗಳಾದಾಗ ಧೈರ್ಯದಿಂದ ಎದುರಿಸಿ ಜೀವನ ಬೆಳಗಿಸಿರಿ” ಎಂದು ಯುವ ಸಮುದಾಯಕ್ಕೆ ಧೈರ್ಯ ತುಂಬಿದರು.










ಮುಖ್ಯ ಅತಿಥಿಗಳಾಗಿ ದೇವಮಾತಾ ಕಾನ್ವೆಂಟಿನ ಭಗಿನಿ ಸುಚಿತ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ವಲಯ ಮುಖ್ಯಸ್ಥ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ, ವಾಳೆಗಳ ಗುರಿಕಾರರಾದ ವಿಲಿಯಂ ಪಿರೇರಾ, ರವಿ ಫೆರಾವೊ ಮತ್ತು ರಾಜೇಶ್ ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಆನ್ಸನ್ ಲೂವಿಸ್ ಹಾಗೂ ಕ್ಲಿಯೊನಾ ಕ್ರಾಸ್ತಾರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಆಗಮಿಸಿದ ಎಲ್ಲಾ ಯುವಕ ಯುವತಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.








ಜೀವನ್ ಡಿಸೋಜ ನೆರೆದ ಎಲ್ಲರನ್ನೂ ಸ್ವಾಗತಿಸಿದರು. ಸಂತೋಷ್ ಡಿಸೋಜ ವಂದನಾಪನೆಗೈದರು. ವೀಣಾ ರೊಸಾರಿಯೊ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.




