ಪಾಂಡೇಶ್ವರ ಮಹಿಳಾ ಠಾಣೆಯ ASI ರಾಜೇಶ್ ಹೆಗ್ಡೆ ಹೃದಯಾಘಾತದಿಂದ ಅಕಾಲಿಕ ನಿಧನ
ಕರ್ತವ್ಯನಿಷ್ಠೆಗೆ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಶ್ಲಾಘನೆ

ವಿಟ್ಲ ಪೊಲೀಸ್ ಠಾಣೆಯಲ್ಲಿ ಇಲಾಖಾ ವೃತ್ತಿ ಪ್ರಾರಂಭ

ಪಾಂಡೇಶ್ವರ ಮಹಿಳಾ ಠಾಣೆಯ ASI 53 ವರ್ಷ ಪ್ರಾಯದ ರಾಜೇಶ್ ಹೆಗ್ಡೆಯವರು ಇಂದು ಸೆಪ್ಟೆಂಬರ್ 27ರಂದು ಶನಿವಾರ ಹೃದಯಾಘಾತದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಮಧ್ಯಾಹ್ನ 2 ಗಂಟೆಯ ತನಕ ಅವರು ಕರ್ತವ್ಯದಲ್ಲಿದ್ದರು ಎನ್ನಲಾಗಿದೆ. ಕಾಸರಗೋಡಿನ ಚಿತ್ತಾರಿ ಮೂಲದ ಇವರು ಉರ್ವಸ್ಟೋರ್ ಬಳಿ ನೆಲೆಸಿದ್ದರು. 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಇವರು ವಿಟ್ಲ ಠಾಣೆಯಲ್ಲಿ ಸೇವೆಯನ್ನು ಪ್ರಾರಂಭಿಸಿ, ಬಂದರು ಸೇರಿದಂತೆ ಅನೇಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಮಧ್ಯಾಹ್ನ ಮನೆಗೆ ಊಟಕ್ಕೆ ಬಂದಾಗ ಅಕಸ್ಮಿಕವಾಗಿ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.


ಸಹೋದ್ಯೋಗಿಗಳು ಅವರನ್ನು ಸ್ಮರಿಸುತ್ತಾ – ರಾಜೇಶ್ ಹೆಗ್ಡೆ ಎಂದಿಗೂ ಎಲ್ಲರ ಜೊತೆ ಸ್ನೇಹಭಾವದಿಂದ ವರ್ತಿಸುತ್ತಿದ್ದರು. ತೊಂದರೆಗೀಡಾದ ನಾಗರಿಕರಿಗೆ ತಕ್ಷಣ ಸ್ಪಂದಿಸುವ ಗುಣ ಅವರಲ್ಲಿತ್ತು. ಯಾವುದೇ ಪ್ರಕರಣವನ್ನು ಶಾಂತವಾಗಿ, ಕಾನೂನಿನ ವ್ಯಾಪ್ತಿಯಲ್ಲಿ ನಿಭಾಯಿಸುವಲ್ಲಿ ಅವರು ಮಾದರಿಯಾಗಿದ್ದರು. ಅವರು ಯಾವಾಗಲೂ ನಗುನಗುತ್ತಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಠಾಣೆಯ ವಾತಾವರಣವನ್ನು ಹಸನಾಗಿಸುತ್ತಿದ್ದರು”ಎಂದು ಸಹೋದ್ಯೋಗಿಗಳು ಅವರನ್ನು ಸ್ಮರಿಸುತ್ತಾರೆ.

ಮೇಲಾಧಿಕಾರಿಗಳು ರಾಜೇಶ್ ಹೆಗ್ಡೆಯವರ ಸೇವೆಯನ್ನು ಮೆಚ್ಚಿ, ಅವರು ಅತ್ಯಂತ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಾಮಾಣಿಕತೆ ಹಾಗೂ ಪರಿಶ್ರಮದಲ್ಲಿ ಮಾದರಿ ಪೊಲೀಸ್ ಅಧಿಕಾರಿಯಾಗಿದ್ದರು. ವಿವಿಧ ಠಾಣೆಗಳಲ್ಲಿ ಅವರು ತೋರಿಸಿದ ಸೇವೆ ಇಲಾಖೆಗೆ ಶ್ಲಾಘನೀಯ. ಅವರ ಅಕಾಲಿಕ ನಿಧನ ಪೊಲೀಸ್ ಇಲಾಖೆಗೆ ಭಾರೀ ನಷ್ಟ” ಎಂದು ಶ್ರದ್ಧಾಂಜಲಿ ಸಲ್ಲಿಸಿ ಹೇಳುತ್ತಾರೆ.
ರಾಜೇಶ್ ಹೆಗ್ಡೆಯವರ ಅಗಲಿಕೆಯಿಂದ ಸಹೋದ್ಯೋಗಿಗಳು, ನಾಗರಿಕರು ಹಾಗೂ ಪೊಲೀಸ್ ಇಲಾಖೆ ಆಳವಾದ ದುಃಖ ವ್ಯಕ್ತಪಡಿಸಿದೆ.




