ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಸಭೆ

ಮಾನವೀಯ ಸೇವೆ ರೆಡ್‌ಕ್ರಾಸ್ ಸಂಸ್ಥೆಯ ಗುರಿ – ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.
ರಕ್ತದಾನ, ಆರೋಗ್ಯ ಕಾಳಜಿ, ವಿಪತ್ತು ಪರಿಹಾರ ಸಹಿತ ಹಲವು ಸೇವಾ ಕಾರ್ಯಗಳ ಮೂಲಕ ರೆಡ್‌ಕ್ರಾಸ್ ಸಮಾಜಕ್ಕೆ ನೆರವಾಗುತ್ತಿದೆ. ವಿಶ್ವದಾದ್ಯಂತ ರೆಡ್‌ಕ್ರಾಸ್ ಪಸರಿಸಿದ್ದು ಮಾನವೀಯ ಸೇವೆಯೇ ಸಂಸ್ಥೆಯ ಗುರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್ ಎಚ್.ವಿ. ಹೇಳಿದರು.
ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಭವ್ಯ ಶತಮಾನೋತ್ಸವ ಕಟ್ಟಡದ ನಿರ್ಮಾಣ ಸಹಿತ ರೆಡ್‌ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಸಿ.ಎ. ಶಾಂತಾರಾಮ ಶೆಟ್ಟಿ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲಾಡಳಿತ, ದಾನಿಗಳು ಹಾಗೂ ರೆಡ್‌ಕ್ರಾಸ್ ಸದಸ್ಯರ ನೆರವಿನಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ನಿರ್ಮಾಣವಾಗಿರುವುದು ಹೆಮ್ಮೆ ತಂದಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಇತರ ಆರೋಗ್ಯ ಸಮಸ್ಯೆ ಸಂಬಂಧಿಸಿ ದಾಖಲಾದವರಿಗೆ ಅವಶ್ಯ ಇದ್ದರೆ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಹಿತಿ ಒದಗಿಸಲು ರೆಡ್‌ಕ್ರಾಸ್‌ನಿಂದ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ’ ಎಂದು ಮಾಹಿತಿ ನೀಡಿದರು.
ರೆಡ್‌ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ ಶೆಟ್ಟಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶತಮಾನೋತ್ಸವ ಕಟ್ಟಡ ನಿರ್ಮಣಕ್ಕೆ ನೆರವಾದ ದಾನಿಗಳನ್ನು ಮತ್ತು ಆಡಳಿತ ಮಂಡಳಿಯ ಮಾಜಿ ನಿರ್ದೇಶಕರನ್ನು ಗೌರವಿಸಲಾಯಿತು. ತಾಲೂಕು ಮಟ್ಟದಲ್ಲಿ ಅತ್ಯುತ್ತಮ ಘಟಕ ಕಾರ್ಯ ನಿರ್ವಹಣೆಗಾಗಿ ಸುಳ್ಯ ಘಟಕದ ಅಧ್ಯಕ್ಷ ಪಿ.ಬಿ. ಸುಧಾಕರ ರೈ (ಪ್ರಥಮ) ಹಾಗೂ ಬೆಳ್ತಂಗಡಿ ಘಟಕದ ಹರಿದಾಸ್ ಎಸ್. ಎಂ. (ದ್ವಿತೀಯ) ಪುರಸ್ಕಾರ ಸ್ವೀಕರಿಸಿದರು.
ರೆಡ್‌ಕ್ರಾಸ್ ಜಿಲ್ಲಾ ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ವರದಿ ವಾಚಿಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಡಾ. ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ ಕೆ., ನಿರ್ದೇಶಕರಾದ ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ.ಬಿ. ಸಚ್ಚಿದಾನಂದ ರೈ, ಗುರುದತ್ ಎಂ. ನಾಯಕ್, ವಿಟ್ಟಲ ಎ., ಡಾ. ಸುಮನಾ ಬಿ. ಉಪಸ್ಥಿತರಿದ್ದರು.