ಪಿಲಿಕುಳ ನಿಸರ್ಗಧಾಮದಲ್ಲಿ ಲೋಕಾಯುಕ್ತರ ಅನಿರೀಕ್ಷಿತ ದಾಳಿ

ನಿರ್ವಹಣಾ ಲೋಪದೋಷಗಳ ಪತ್ತೆ – ತನಿಖೆ ಮುಂದುವರಿಕೆ
ಮಾನಸ ವಾಟರ್ ಪಾರ್ಕ್, ಮೃಗಾಲಯ ಸೇರಿದಂತೆ ಇತರ ಕಡೆಗಳಲ್ಲಿ ಅವ್ಯವಹಾರ ಕಂಡು ಬಂದಲ್ಲಿ ಕೂಡಲೆ ಲೋಕಾಯುಕ್ತಕ್ಕೆ ದೂರು ನೀಡಲು ಸೂಚನೆ
ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳು ಅಕ್ಟೋಬರ್ 16ರಂದು ಗುರುವಾರ ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಚಾನಕ್ ಸರ್ಚ್ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ. ಕುಮಾರ್ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ರವಿ ಪೀರು ಪವಾರ್, ಸುರೇಶ್ ಕುಮಾರ್ ಪಿ. ಹಾಗೂ ಉಡುಪಿ ಲೋಕಾಯುಕ್ತದ ರಾಜೇಂದ್ರ ನಾಯ್ಕ್ ಎಂ.ಎನ್. ಸೇರಿದಂತೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತು.
ಪರಿಶೀಲನೆಯ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಕೆಲವು ಲೋಪದೋಷಗಳು ಪತ್ತೆಯಾಗಿದ್ದು, ಸಂಬಂಧಿತ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಮೃಗಾಲಯ, ಗುತ್ತು ಮನೆ, ಮಾನಸ ವಾಟರ್ ಪಾರ್ಕ್, ಲೇಕ್ ಗಾರ್ಡನ್ ಹಾಗೂ ಸೈನ್ಸ್ ಮ್ಯೂಸಿಯಂ ಸೇರಿದಂತೆ ಅನೇಕ ಘಟಕಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ.
ಸಾರ್ವಜನಿಕರು ಯಾವುದೇ ಅಕ್ರಮ ಅಥವಾ ಅವ್ಯವಹಾರಗಳ ಬಗ್ಗೆ ಮಾಹಿತಿ ನೀಡಲು ಲೋಕಾಯುಕ್ತ ಕಚೇರಿಯ ☎️ 0824-2950997 ಗೆ ಕರೆ ಮಾಡಬಹುದು ಅಥವಾ ನೇರವಾಗಿ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರಾದ (ಪ್ರಭಾರ) ಕುಮಾರಚಂದ್ರರವರು ತಿಳಿಸಿದ್ದಾರೆ.