ನಕಲಿ ಚೆಕ್‌ಗಳ ಮೂಲಕ ಲಕ್ಷಾಂತರದ ಲ್ಯಾಪ್‌ಟಾಪ್ ವಂಚನೆ – ಬರ್ಕೆ ಪೊಲೀಸರಿಂದ ಫರೀದಾ ಬೇಗಂ ಬಂಧನ
ಮಂಗಳೂರು ನಗರದಲ್ಲಿ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಮೋಸದ ಬಲೆ ಬೀಸಿದ್ದ ಆರೋಪಿತೆ

ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಒಟ್ಟು 9 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 28 ವರ್ಷ ಪ್ರಾಯದ ಫರೀದಾ ಬೇಗಂ @ ಫರೀದಾ ಎಂಬ ವಂಚಕಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಮೊಕದ್ದಮೆ ನಂಬರ್ 77/2025ರ ಪ್ರಕರಣದಲ್ಲಿ, ಪಿರ್ಯಾದಿದಾರರಾದ ಜಯರಾಯರವರು ಮಂಗಳೂರು ನಗರದ ಎಂಪೈರ್ ಮಾಲ್‌ನಲ್ಲಿ “ಲ್ಯಾಪ್‌ಟಾಪ್ ಬಜಾರ್” ಎಂಬ ಅಂಗಡಿ ನಡೆಸುತ್ತಿದ್ದರು. ಈ ಅಂಗಡಿಯಿಂದ ಆರೋಪಿತೆ ಫರೀದಾ ಬೇಗಂ ನಕಲಿ ಚೆಕ್‌ಗಳನ್ನು ನೀಡಿ ಆ್ಯಪಲ್ ಮತ್ತು ಡೆಲ್ ಕಂಪನಿಯ ಒಟ್ಟು ₹1,98,000 ಮೌಲ್ಯದ ಮೂರು ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಹಣ ಪಾವತಿ ಮಾಡದೆ ವಂಚನೆ ನಡೆಸಿದ್ದಾಳೆ.

ಈ ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿಯವರ ನೇತೃತ್ವದಲ್ಲಿ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬ್ಬಂದಿಗಳು ನಡೆಸಿ ಆರೋಪಿತೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿತೆಯನ್ನು ಇಂದು ಅಕ್ಟೋಬರ್ 19ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 2025 ನವಂಬರ್ 03ರ ತನಕ ನ್ಯಾಯಾಂಗ ಬಂಧನಕ್ಕೆ ವಿಧಿಸಿದೆ.


ಪೊಲೀಸರು ತಿಳಿಸಿರುವಂತೆ, ಫರೀದಾ ಬೇಗಂ ಹಲವು ಚಿನ್ನಾಭರಣ ಮತ್ತು ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ನೀಡಿ, ಸಿಹಿ ಮಾತುಗಳಿಂದ ವ್ಯಾಪಾರಿಗಳನ್ನು ನಂಬಿಸಿ ಮಾನ್ಯತೆ ಇಲ್ಲದ ಬ್ಯಾಂಕ್ ಚೆಕ್‌ಗಳನ್ನು ನೀಡಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತಿದ್ದಳು. ಆಕೆಯ ವಿರುದ್ಧ ಮಂಗಳೂರು ನಗರದ ಕಾವೂರು, ಬಜಪೆ, ಮೂಡಬಿದ್ರೆ, ಮುಲ್ಕಿ, ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ವಂಚನೆ ಪ್ರಕರಣಗಳು ದಾಖಲಾಗಿವೆ. ಮುಲ್ಕಿ ಠಾಣೆಯ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದ ಕಾರಣ ಆಕೆಯ ವಿರುದ್ಧ ವಾರೆಂಟ್ ಕೂಡಾ ಹೊರಡಿಸಲಾಗಿದೆ.




