ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ರವರು ಜಿಲ್ಲಾ ಪ್ರತಿನಿಧಿ ನ್ಯಾಯವಾದಿ ಮಹೇಶ್ ಕಜೆ ನಿವಾಸಕ್ಕೆ ಭೇಟಿ
ಶಾಲು ಹಾಗೂ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದ ಕಜೆ ಕುಟುಂಬ

ಕರ್ನಾಟಕ ಬ್ರಾಹ್ಮಣ ಸಮುದಾಯದ ಸಂಘಟನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಇದರ ನೂತನ ಅಧ್ಯಕ್ಷ ಎಸ್. ರಘುನಾಥ್‌ರವರು ಅಕ್ಟೋಬರ್ 25ರಂದು ಶನಿವಾರ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ಜಿಲ್ಲಾ ಪ್ರತಿನಿಧಿ, ಪುತ್ತೂರು ಕಜೆ ಲಾ ಛೇಂಬರ‍್ಸ್‌ನ ಮುಖ್ಯಸ್ಥರಾಗಿರುವ ನ್ಯಾಯವಾದಿ ಮಹೇಶ್ ಕಜೆಯವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಹೇಶ್ ಕಜೆ, ಅವರ ಪತ್ನಿ ದೀಪಿಕಾ ಕಜೆ ಮಕ್ಕಳಾದ ಮಂದಿರ ಕಜೆ ಹಾಗೂ ಮನಿಷಾ ಕಜೆ ಇವರು ಎಸ್. ರಘುನಾಥ್‌ರವರನ್ನು ಆತ್ಮೀಯವಾಗಿ ಸ್ವಾಗತಿಸಿ ಶಾಲು ಹಾಗೂ ಹೂಗುಚ್ಚ ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಘುನಾಥ್ ರವರು ಅಖಿಲ ಕರ್ನಾಟಕ ಮಹಾಸಭಾಕ್ಕೆ ಚುನಾವಣೆ ನಡೆದು ನಾನು ಅಧ್ಯಕ್ಷನಾಗಿ ಆಯ್ಕೆಯಾಗಿ ಆರು ತಿಂಗಳು ಕಳೆದಿದೆ. ಆ ನಂತರದ ದಿನಗಳಲ್ಲಿ ಮಹಾಸಭಾದ ಚಟುವಟಿಕೆಗಳನ್ನು ನಿಧಾನವಾಗಿ ಆರಂಭ ಮಾಡುತ್ತಿದ್ದೇವೆ. ಬಹಳಷ್ಟು ಜನರ ನೀರೀಕ್ಷೆಗಳು ತುಂಬಾ ಇವೆ. ಮಹಾಸಭಾಕ್ಕೆ ಕಳೆದ 5 ತಿಂಗಳಿನಲ್ಲಿ 11 ಸಾವಿರ ಸದಸ್ಯತನ ಮಾಡಿದ್ದೇವೆ. ಇದೊಂದು ದಾಖಲೆಯೇ ಆಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ಆರ್ಥಿಕ ಸದೃಢತೆ ತರಬೇಕೆಂಬ ಉದ್ದೇಶ ಇದೆ. ಕಟ್ಟಕಡೆಯ ಬ್ರಾಹ್ಮಣನಿಗೂ ಮಹಾಸಭಾದಿಂದ ಯಾವುದಾದರೂ ಸಹಾಯ ಸಿಗಬೇಕು. ನಮ್ಮ ದೂರದೃಷ್ಟಿ ತುಂಬಾ ಇದೆ. ನಮ್ಮ ಕಲ್ಪನೆ ಏನೆಂದರೆ 100 ಕೋಟಿ ರೂಪಾಯಿ ಧನಸಂಗ್ರಹ ಒಟ್ಟುಗೂಡಿಸಬೇಕು. ಈಗಾಗಲೇ 65 ಲಕ್ಷಕ್ಕೆ ವಾಗ್ದಾನ ಬಂದಿದೆ. ನಮ್ಮ ಕಚೇರಿಯನ್ನು ಈಗಾಗಲೇ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಿಸಿದ್ದೇವೆ. ಇದನ್ನು ಸ್ವಂತ ಖರ್ಚಿನಲ್ಲೇ ಮಾಡಲಾಗಿದೆ. ನಾವು ನಿಧಾನವಾಗಿ ಬದಲಾವಣೆಯತ್ತ ಹೆಜ್ಜೆ ಇಟ್ಟಿದ್ದೇವೆ. ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಎಕೆಬಿಎಂಎಸ್ ಜಿಲ್ಲಾ ಪ್ರತಿನಿಧಿ ನ್ಯಾಯವಾದಿ ಮಹೇಶ್ ಕಜೆಯವರು ಅಖಿಲ ಕರ್ನಾಟಕದ ಆಶಯಕ್ಕೆ ಅರ್ಥ ಬರಬೇಕು ಎಂಬ ದೃಷ್ಟಿಯಿಂದ ಬ್ರಾಹ್ಮಣ ಸಮುದಾಯದ ಎಲ್ಲಾ ಒಳ ಪಂಗಡದವರು ಒಟ್ಟು ಗೂಡಬೇಕೆಂಬುದು ನಮ್ಮ ಉದ್ದೇಶವಾಗಿದೆ. ರಘುನಾಥ್ ಎಸ್. ರವರ ನಾಯಕತ್ವದಲ್ಲಿ ಇದು ಮೂಡಿಬರಬೇಕು. ಸಮರ್ಥ ನಾಯಕತ್ವವಿದ್ದರೆ ನಮ್ಮ ದಕ್ಷಿಣ ಕನ್ನಡ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿ ಯಾವುದೇ ಮುಲಾಜಿಲ್ಲದೆ ಸಹಕರಿಸುತ್ತೇವೆ. ಅಖಿಲ ಕರ್ನಾಟಕ ಮಹಾಸಭಾದ ಬೈಲಾದ ಮಿತಿಯಲ್ಲಿ ಕೆಲಸ ಮಾಡಬೇಕಾದ ಬದ್ಧತೆ ಇದೆ. ಜಿಲ್ಲಾ, ತಾಲೂಕು ಸಮಿತಿ ಇಲ್ಲ. ಈ ಭಾಗದಲ್ಲಿ ಒಂಭತ್ತು ಪಂಗಡ ಇದೆ. ಈ ಪಂಗಡದ ಮೂಲಕ ಅಖಿಲ ಕರ್ನಾಟಕ ಮಹಾಸಭಾದ ಅಧ್ಯಕ್ಷರ ಆಯ್ಕೆ ನಡೆದಿದೆ. ಮುಂದೆ ಕೂಡ ಇದೇ ರೀತಿ ಮುಂದುವರಿಯುವ ಅವಕಾಶ ಮಾಡಿಕೊಡಬೇಕು. ಉತ್ತಮ ತಂಡ ಇದೆ. ಸಂಘಟನೆಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದರು.





ಈ ಸಂದರ್ಭ ದ್ವಾರಕ ಕನ್‌ಸ್ಟ್ರಕ್ಷನ್ಸ್‌ನ ಜಿ.ಕೆ. ಭಟ್, ಕೋಟ ಮಹಾಜಗತ್ತು ಕಾರ್ಯದರ್ಶಿ ಸೂರ್ಯನಾರಾಯಣ, ವಿಶ್ವಹಿಂದೂ ಪರಿಷದ್ ಮಠ ಮಂದಿರ ಅರ್ಚಕ ಮಂಗಳೂರು ಜಿಲ್ಲಾ ವಿಭಾಗ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ಪುತ್ತೂರು ಶಿವಳ್ಳಿ ಸಂಪದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಹವ್ಯಕ ಅಧ್ಯಕ್ಷ ವೆಂಕಟಕೃಷ್ಣ ದರ್ಬೆ, ಕರಾಡ ಬ್ರಾಹ್ಮಣ ಅಸೋಸಿಯೇಷನ್‌ನ ರಾಮಚಂದ್ರ ಭಟ್, ಉದ್ಯಮಿಗಳಾದ ಗೋಪಾಲಕೃಷ್ಣ ಹೇರಳೆ, ಉಮೇಶ್ ಶಾಸ್ತ್ರಿ ಬೆಂಗಳೂರು, ನರಸಿಂಹ ರಾವ್, ಕೂಟ ಮಹಾಜಗತ್ತು ಇದರ ಪುತ್ತೂರು ಅಧ್ಯಕ್ಷ ಸದಾಶಿವ ಹೊಳ್ಳ, ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕ ಶಿವಶಂಕರ್ ಭಟ್ ಬೋನಂತಾಯ, ಮುಳಿಯ ಜ್ಯುವೆಲ್ಲರ‍್ಸ್‌ನ ಸಿಎಂಡಿ ಕೇಶವಪ್ರಸಾದ್ ಮುಳಿಯ, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ಜಿಲ್ಲಾ ಪ್ರತಿನಿಧಿ ರಾಜಶೇಖರ, ಆರ್.ಡಿ. ಶಾಸ್ತ್ರಿ ಸೇರಿದಂತೆ ವಿವಿಧ ಬ್ರಾಹ್ಮಣ ಪಂಗಡಗಳ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.


ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ:
ಎಸ್. ರಘುನಾಥ್ ರವರು ಮಹೇಶ್ ಕಜೆ ನಿವಾಸದಿಂದ ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭ ಅವರು ಶಾಸಕ ಅಶೋಕ್ ಕುಮಾರ್ ರೈ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ರವರೊಂದಿಗೆ ದೇವಳದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.



