ಮಾಹಿತಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಹಶೀಲ್ದಾರ್ ರಶ್ಮಿ ಇವರಿಗೆ ರೂಪಾಯಿ 25,000 ದಂಡ
ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಗೆ ಶಿಕ್ಷೆ

ಮಾಹಿತಿ ಹಕ್ಕು ಕಾಯ್ದೆ (RTI Act) ಅಡಿಯಲ್ಲಿ ಆಯೋಗದ ಆದೇಶವನ್ನು ಪಾಲಿಸದೆ ನಿರ್ಲಕ್ಷ್ಯ ತೋರಿದ ಕುಣಿಗಲ್ ತಾಲ್ಲೂಕಿನ ತಹಶೀಲ್ದಾರ್ ರಶ್ಮಿ ಯು. ಅವರಿಗೆ ಕರ್ನಾಟಕ ಮಾಹಿತಿ ಆಯೋಗವು ರೂಪಾಯಿ 25,000 ದಂಡ ವಿಧಿಸಿದೆ. ಜೊತೆಗೆ ಅರ್ಜಿದಾರರಾದ ನರಸೇಗೌಡ ಕೆ.ಎನ್. ರವರಿಗೆ ರೂಪಾಯಿ 5,000 ಪರಿಹಾರ ನೀಡುವಂತೆ ಆಯೋಗವು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ದಾಖಲೆಗಳು ಲಭ್ಯವಿಲ್ಲವೆಂದು ಹೇಳಿ ನಿರ್ಲಕ್ಷ್ಯ
ಅರ್ಜಿದಾರರು ದಿನಾಂಕ 02.08.2024 ರಂದು ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 6(1) ಅಡಿಯಲ್ಲಿ ಅರ್ಜಿ ಸಲ್ಲಿಸಿ, ಕುಂದೂರು ಗ್ರಾಮದ ಸರ್ವೇ ಸಂಖ್ಯೆ 19ರ 1 ಎಕರೆ 15 ಗುಂಟೆ ಭೂಮಿಗೆ ಸಂಬಂಧಿಸಿದ ಅನುಭವ ನಕ್ಷೆ ಮತ್ತು ಕಡತದ ಚಲನವಲನದ ದಾಖಲೆಗಳ ನಕಲುಗಳನ್ನು ಕೋರಿದ್ದರು.
ಆದರೆ ತಹಸೀಲ್ದಾರ್ ಕಛೇರಿಯಿಂದ ನಿರ್ದಿಷ್ಟಾವಧಿಯೊಳಗೆ ಮಾಹಿತಿ ನೀಡದೆ, ದಾಖಲೆಗಳು ಲಭ್ಯವಿಲ್ಲವೆಂದು ಹೇಳಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅರ್ಜಿದಾರರು ಮಾಹಿತಿ ಆಯೋಗವನ್ನು ಸಂಪರ್ಕಿಸಿದರು.




ಆಯೋಗದ ವಿಚಾರಣೆ ಮತ್ತು ನಿರ್ಣಯ:
ಮಾಹಿತಿ ಆಯೋಗವು ದಿನಾಂಕ 08.09.2025 ರಂದು ವಿಚಾರಣೆ ನಡೆಸಿ, ಪ್ರತಿವಾದಿಯು ಆಯೋಗದ ಹಿಂದಿನ ಆದೇಶಗಳನ್ನು ಪಾಲಿಸದಿರುವುದು ಹಾಗೂ ದಾಖಲೆಗಳ ನಿರ್ವಹಣೆಯ ಬಗ್ಗೆ ಅಜಾಗರೂಕತೆ ತೋರಿರುವುದು ದೃಢಪಟ್ಟಿದೆ. ಆಯುಕ್ತರಾದ ರುದ್ರಣ್ಣ ಹರ್ತಿಕೋಟೆಯವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಹಸೀಲ್ದಾರ್ ಕುಣಿಗಲ್ ರಶ್ಮಿಯವರ ಮೇಲೆ ಮಾಹಿತಿ ಹಕ್ಕು ಕಾಯ್ದೆ 2005ರ ಕಲಂ 20(1) ಅಡಿಯಲ್ಲಿ ರೂಪಾಯಿ 25,000 ದಂಡ ವಿಧಿಸಿದ್ದಾರೆ.

ದಂಡ ಮತ್ತು ಶಿಸ್ತು ಕ್ರಮ : ಆಯೋಗವು ಆದೇಶಿಸಿರುವಂತೆ, ನವೆಂಬರ್ ಮಾಸದ ವೇತನದಿಂದ ರೂಪಾಯಿ 25,000 ದಂಡ ಮೊತ್ತವನ್ನು ಕತ್ತರಿಸಿ ಸರ್ಕಾರದ ಲೆಕ್ಕ ಶೀರ್ಷಿಕೆ Head of Account: 0070-60-118-0-01-000 (Receipts under RTI Act) ಅಡಿಯಲ್ಲಿ ಜಮಾ ಮಾಡಲು ಸೂಚಿಸಲಾಗಿದೆ. ಜೊತೆಗೆ ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸಾರ್ವಜನಿಕ ವಲಯದಿಂದ ಆಯುಕ್ತರಿಗೆ ಅಭಿನಂದನೆ : ಮಾಹಿತಿ ಹಕ್ಕು ಕಾಯ್ದೆ ಮತ್ತು ಆಯೋಗದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆರವರಿಗೆ ಸಾರ್ವಜನಿಕ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.



