ಸಿ.ಒ.ಡಿ.ಪಿ. ಹಾಗೂ ಬಾಳೆಪುಣಿ ಪ್ರಗತಿ ಮಹಾ ಸಂಘದಿಂದ ದೀಪಾವಳಿ ಆಚರಣೆ
ಮಹಿಳೆಯು ಶಿಕ್ಷಣದ ಬೆಳಕಿನಿಂದ ಬೆಳಗಿದರೆ ಕತ್ತಲೆಗಳು ದೂರ – ಫಾದರ್ ಅಸಿಸ್ಸಿ

ಸಿ.ಒ.ಡಿ.ಪಿ. ಮಂಗಳೂರು ಹಾಗೂ ಬಾಳೆಪುಣಿ ಪ್ರಗತಿ ಮಹಾ ಸಂಘದ ಸದಸ್ಯ ಸಂಘಗಳ ವತಿಯಿಂದ ದೀಪಾವಳಿ ಹಬ್ಬವನ್ನು ಮಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಿಪು ಚರ್ಚ್‌ನ ಧರ್ಮಗುರು ವಂದನೀಯ ಫಾದರ್ ಅಸಿಸ್ಸಿ ರೆಬೆಲ್ಲೊರವರು ವಹಿಸಿದ್ದರು. ಅವರು ದೀಪಾವಳಿ ಹಬ್ಬದ ಶುಭಾಶಯ ಸಂದೇಶ ನೀಡಿ, “ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ಜಯದ ಸಂಕೇತವಾಗಿದೆ. ಈ ಹಬ್ಬದ ನಿಜವಾದ ಅರ್ಥ ಬಡವರ ಜೀವನದಲ್ಲೂ ಬೆಳಕನ್ನು ಹರಡುವುದಾಗಿದೆ. ಶಿಕ್ಷಣವು ಮಹಿಳೆಯರಿಗೆ ನಿಜವಾದ ದೀಪವಾಗಿದ್ದು, ಅದು ಅವರನ್ನು ಪ್ರಗತಿಯ ಮಾರ್ಗದತ್ತ ಕೊಂಡೊಯ್ಯುತ್ತದೆ. ಸಮಾಜದಲ್ಲಿ ಪ್ರತಿ ಮಹಿಳೆಯೂ ಶಿಕ್ಷಣದ ಬೆಳಕಿನಿಂದ ಬೆಳಗಿದರೆ ಕತ್ತಲೆಗಳು ದೂರವಾಗುತ್ತವೆ. ಎಲ್ಲರೂ ಒಟ್ಟಾಗಿ ದೀಪಾವಳಿಯನ್ನು ಮಾನವೀಯತೆ, ಪ್ರೀತಿ ಮತ್ತು ಶಿಕ್ಷಣದ ಹಬ್ಬವನ್ನಾಗಿ ಆಚರಿಸೋಣ” ಎಂದು ಹಾರೈಸಿದರು.









ಸಿ.ಒ.ಡಿ.ಪಿ. ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜರವರು ಮಾತನಾಡಿ, “ಮಹಿಳೆಯರು ಸಮಾಜದ ಬುನಾದಿಯಾಗಿದ್ದು, ಅವರ ಸಬಲೀಕರಣವೇ ನಿಜವಾದ ಅಭಿವೃದ್ಧಿಯ ಮಾರ್ಗವಾಗಿದೆ. ದೀಪಾವಳಿ ಹಬ್ಬದ ಬೆಳಕಿನಂತೆ ಮಹಿಳೆಯರು ತಮ್ಮ ಜೀವನದಲ್ಲೂ ಪ್ರೇರಣೆಯ ದೀಪವಾಗಿ ಹೊಳೆಯಬೇಕು. ಉತ್ತಮ ನಾಯಕಿಯರಾಗಿ ಬೆಳೆದು ಇತರರನ್ನು ಬೆಳಕಿನತ್ತ ಕೊಂಡೊಯ್ಯುವ ಶಕ್ತಿಯನ್ನು ಮಹಿಳೆಯರು ಹೊಂದಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ತನ್ನೊಳಗಿನ ಸಾಮರ್ಥ್ಯವನ್ನು ಅರಿತು ಕಾರ್ಯಗತಗೊಳಿಸಿದಾಗ ಸಮಾಜವೇ ಬದಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ತಮ್ಮ ಕನಸುಗಳಿಗೆ ಬೆಳಕಾಗಲಿ” ಎಂದು ಹಾರೈಸಿದರು.













ಕಾರ್ಯಕ್ರಮದಲ್ಲಿ ಸಿ.ಒ.ಡಿ.ಪಿ. ಕಾರ್ಯಕರ್ತೆ ಗುಲಾಬಿಯವರು ‘ಲಿಂಗಸಮಾನತೆ ಮತ್ತು ನ್ಯಾಯ’ದ ಕುರಿತು ತರಬೇತಿ ನೀಡಿದರು. ಸಂಯೋಜಕಿ ಸುಪ್ರಿಯಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಿಲ್ಲಿ ಡಿಸೋಜರವರು ಸ್ವಾಗತಿಸಿ, ಬೆನೆಡಿಕ್ಟಾ ವಂದನೆ ಸಲ್ಲಿಸಿದರು. ಮೇಬಲ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರೂಪಿಸಿದರು.




