ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ
ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ

ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ

ಮಾಣಿ ಗ್ರಾಮದ ಸರ್ವೆ ನಂಬರ್ 135 ರಲ್ಲಿ ಇರುವ ಸರಕಾರಿ ಜಮೀನಿನ ಮೇಲೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಐಶಾರಾಮಿ ಬಂಗ್ಲೆ ನಿರ್ಮಿಸಿರುವ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಆದೇಶದಂತೆ ಬಂಟ್ವಾಳ ತಹಶೀಲ್ದಾರ್ ಕಚೇರಿಯಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ಈ ಸಂಬಂಧ ಬಂಟ್ವಾಳ ತಹಶೀಲ್ದಾರ್ ಕಚೇರಿ “ಎನ್‌ಸಿಆರ್/ಸಿಆರ್/262/2025-26” ಸಂಖ್ಯೆಯ ನೋಟಿಸನ್ನು ದಿನಾಂಕ 14-10-2025ರಂದು ಹೊರಡಿಸಿದೆ.

ಪ್ರಕರಣದ ಹಿನ್ನೆಲೆ:
ಸಾಮಾಜಿಕ ಕಾರ್ಯಕರ್ತ ಮಾಣಿ ಗ್ರಾಮದ ಸ್ಟೀವನ್ ಪ್ರಕಾಶ್ ಮಾರ್ಟಿಸ್ ರವರು ದಿನಾಂಕ 23-05-2025 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿಯ ಮಾಣಿ ಗ್ರಾಮದ ಸರ್ವೇ ನಂಬರ್ 135 ಸರಕಾರಿ ಜಮೀನಿನಲ್ಲಿ ಲೂಸಿಯಾ ಮೆಟಿಲ್ಡಾ ಪಿಂಟೊ ಎಂಬವರ ಹೆಸರಿನಲ್ಲಿ ಯಾವುದೇ ಪಹಣಿ ಪತ್ರ, ಭೂ ಪರಿವರ್ತನೆ ಅಥವಾ ಏಕ ವಿನ್ಯಾಸ ನಕ್ಷೆ (9&11) ಇಲ್ಲದೆ ಮತ್ತು ಪಂಚಾಯತ್ ಕಚೇರಿಯಿಂದ ಹಳೆ ಮನೆ ರಿಪೇರಿ ಎಂಬ ಪರವಾನಗಿ ಪಡೆದು ಅನಧಿಕೃತವಾಗಿ ಸರಕಾರಿ ಜಾಗದಲ್ಲಿ ಐಶಾರಾಮಿ ಬಂಗ್ಲೆ ಕಟ್ಟಿರುವ ಬಗ್ಗೆ ಜಿಲ್ಲಾಧಿಕಾರಿಯವರಿಗೆ ದೂರು ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪಂಚಾಯತ್ ರಾಜ್ ನಿರ್ದೇಶಕರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪಕಾರ್ಯದರ್ಶಿಯವರು ದಿನಾಂಕ 13-05-2025 ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡಗಳನ್ನು ನೆಲಸಮಗೊಳಿಸಲು ಆದೇಶಿಸಿದ್ದರೂ, ಮಾಣಿ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಬಂಟ್ವಾಳ ತಾಲೂಕು ಕಚೇರಿಯವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದನ್ನು ಅವರು ದೂರು ಅರ್ಜಿಯಲ್ಲಿ ದಾಖಲಿಸಿದ್ದರು.
ಈ ಅಕ್ರಮ ಕಟ್ಟಡದ ಮೇಲೆ ಸೂಕ್ತ ತನಿಖೆ ನಡೆಸಿ, ಕಟ್ಟಡವನ್ನು ನೆಲಸಮಗೊಳಿಸಿ ಸರಕಾರಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ವಿನಂತಿಸಿದ್ದರು.

ಜಿಲ್ಲಾಧಿಕಾರಿಗಳ ನಿರ್ದೇಶನ :
ಜಿಲ್ಲಾಧಿಕಾರಿಯವರು ದಿನಾಂಕ 29-05-2025 ರಂದು ಈ ಅರ್ಜಿಯನ್ನು ಪರಿಗಣಿಸಿ ಸೂಕ್ತವಾದ ತನಿಖೆ ನಡೆಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಬಂಟ್ವಾಳ ತಹಶೀಲ್ದಾರ್ ರವರಿಗೆ ಪತ್ರ ಮುಖೇನ ಆದೇಶಿಸಿದ್ದರು.
ತನಿಖೆ ಮತ್ತು ತಹಶೀಲ್ದಾರ್ ಕ್ರಮ:
ಮಾಣಿ ಗ್ರಾಮದ ಸರಕಾರಿ ಜಮೀನಿನಲ್ಲಿ ಲೂಸಿಯಾ ಮೆಟಿಲ್ಡಾ ಪಿಂಟೊರವರು ಯಾವುದೇ ಪಹಣಿ ಪತ್ರ, ಭೂ ಪರಿವರ್ತನೆ, ಏಕ ವಿನ್ಯಾಸ ನಕ್ಷೆ ಅಥವಾ ಪಂಚಾಯತ್ ಪರವಾನಗಿ ಇಲ್ಲದೆ ಐಶಾರಾಮಿ ಬಂಗ್ಲೆ ನಿರ್ಮಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ನೀಡಿದ ದೂರನ್ನು ಜಿಲ್ಲಾಧಿಕಾರಿಯವರು ದಿನಾಂಕ 29-05-2025 ರಂದು ಬಂಟ್ವಾಳ ತಹಶೀಲ್ದಾರ್ ಕಚೇರಿಗೆ ರವಾನಿಸಿದ್ದರು.
ಬಂಟ್ವಾಳ ತಹಶೀಲ್ದಾರರು, ವಿಟ್ಲ ಕಂದಾಯ ನಿರೀಕ್ಷಕರಿಂದ ತನಿಖಾ ವರದಿ ಪಡೆದಿದ್ದಾರೆ. ಅದರ ಪ್ರಕಾರ ತಹಶೀಲ್ದಾರರು ತಮ್ಮ ಕಛೇರಿ ಪತ್ರ ಸಂಖ್ಯೆ ಎನ್‌ಸಿಆರ್/ಸಿಆರ್/262/2025-26, ದಿನಾಂಕ 14-10-2025 ರಂತೆ ಅತಿಕ್ರಮಣ ಮಾಡಿರುವ ಜಮೀನನ್ನು ಕೂಡಲೇ ತೆರವುಗೊಳಿಸಲು ನೋಟಿಸನ್ನು ಜಾರಿ ಮಾಡಿದ್ದಾರೆ.

ವಿದ್ಯುತ್ ಸಂಪರ್ಕ ಪಡೆಯಲು ಕೃತಕ ತೆರಿಗೆ ರಶೀದಿ:
ದೂರಿನ ಪ್ರಕಾರ, ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಮಾಣಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಸಹಕಾರದೊಂದಿಗೆ ಮಾಣಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಆರೋಪಿತರಿಂದ ಅತೀ ಕಡಿಮೆ ತೆರಿಗೆ ಕಟ್ಟಿಸಿ ರಶೀದಿ ಪಡೆದು, ವಿಟ್ಲ ಮೆಸ್ಕಾಂ ಕಚೇರಿಗೆ ನೀಡಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ತನಿಖೆಯ ವರದಿ:
ವಿಟ್ಲ ಕಂದಾಯ ನಿರೀಕ್ಷಕರು ಸಲ್ಲಿಸಿದ ವರದಿಯ ಪ್ರಕಾರ, ಲೂಸಿಯಾ ಮೆಟಿಲ್ಡಾ ಪಿಂಟೊರವರು 1991ರಲ್ಲಿ ಗೋಳ್ತಮಜಲು ಮಂಡಲ ಪಂಚಾಯತ್ ನಿಂದ ಪರವಾನಗಿ ಪಡೆದು ಮನೆ ನಿರ್ಮಿಸಿ ವಾಸ್ತವ್ಯದಲ್ಲಿದ್ದರು ಎಂಬುದು ದೃಢಪಟ್ಟಿದೆ.
ಆದರೆ ನಂತರ ಅವರು ಹಳೆಯ ಮನೆಯನ್ನು ಕೆಡವಿ, 2023ರಲ್ಲಿ ಮಾಣಿ ಗ್ರಾಮ ಪಂಚಾಯತ್‌ನಿಂದ “ಹಳೆ ಮನೆ ದುರಸ್ತಿ ಪರವಾನಗಿ” ಹೆಸರಿನಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತಹಶೀಲ್ದಾರ್ ಕಚೇರಿಯ ಕ್ರಮ:
ಮಾಣಿ ಗ್ರಾಮದಲ್ಲಿ ಸರಕಾರಿ ಜಮೀನಿನ ಮೇಲೆ ಅನಧಿಕೃತವಾಗಿ ಕಟ್ಟಿದ ಐಶಾರಾಮಿ ಬಂಗ್ಲೆ ಕುರಿತು ಬಂಟ್ವಾಳ ತಹಶೀಲ್ದಾರ್ ಕಚೇರಿ ತನಿಖೆ ನಡೆಸಿ ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ನೋಟಿಸ್ ನೀಡಿದೆ. ಹಳೆ ಮನೆ ದುರಸ್ತಿ ಪರವಾನಗಿ ಹೆಸರಿನಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿರುವುದು ಸ್ಪಷ್ಟವಾಗಿದ್ದು, ತಹಶೀಲ್ದಾರ್ ಕಚೇರಿ ಅತಿಕ್ರಮಿತ ಜಾಗದಲ್ಲಿರುವ ಮನೆಯನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಂಡಿದೆ.
ಕಂದಾಯ ನಿರೀಕ್ಷಕರ ವರದಿಯ ಆಧಾರದ ಮೇಲೆ ದಿನಾಂಕ 14-10-2025 ರಂದು ಬಂಟ್ವಾಳ ತಹಶೀಲ್ದಾರ್ ಕಚೇರಿಯಿಂದ ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಅತಿಕ್ರಮಿತ ಜಮೀನನ್ನು ಕೂಡಲೇ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಇದರಿಂದ ಸರಕಾರಿ ಜಾಗದಲ್ಲಿ ಯಾವುದೇ ರೀತಿಯ ಅನಧಿಕೃತ ನಿರ್ಮಾಣ ಅಥವಾ ಅತಿಕ್ರಮಣ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗಿದೆ.

ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ರವರಿಗೆ ಎಲ್ಲಾ ದಿಕ್ಕುಗಳಿಂದಲೂ ಶ್ಲಾಘನೆ:
ಮಾಣಿ ಗ್ರಾಮದ ಸರಕಾರಿ ಜಮೀನಿನ ಮೇಲೆ ನಡೆದಿದ್ದ ಈ ಅಕ್ರಮ ನಿರ್ಮಾಣವನ್ನು ಬಯಲಿಗೆ ಎಳೆಯಲು ಸಾಮಾಜಿಕ ಕಾರ್ಯಕರ್ತ ಸ್ಟೀವನ್ ಪ್ರಕಾಶ್ ಮಾರ್ಟಿಸ್ ರವರ ಹೋರಾಟ ಮಹತ್ವದ ಪಾತ್ರವಹಿಸಿದೆ. ಜನಹಿತಕ್ಕಾಗಿ ಅವರು ನಿರಂತರವಾಗಿ ಹೋರಾಡಿ, ಸಂಬಂಧಿತ ಇಲಾಖೆಗಳ ಗಮನ ಸೆಳೆದು ನ್ಯಾಯ ಸಾಧಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ನಿಸ್ವಾರ್ಥ ಸೇವೆ ಮತ್ತು ಧೈರ್ಯಶಾಲಿ ಪ್ರಯತ್ನವು ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ತರಲು ಪ್ರೇರಣಾದಾಯಕವಾಗಿದೆ. ಇಂತಹ ಪ್ರಾಮಾಣಿಕ ಸಾಮಾಜಿಕ ಹೋರಾಟಗಾರರು ನಮ್ಮ ಸಮಾಜಕ್ಕೆ ನಿಜವಾದ ಶಕ್ತಿ.

ಸಾಮಾಜಿಕ ಜಾಗೃತಿ ಅಗತ್ಯ:
ಮಾಣಿ ಗ್ರಾಮದಲ್ಲಿನ ಈ ಅಕ್ರಮ ಬಯಲಿಗೆ ಬಂದಿರುವುದು ಒಂದು ಉದಾಹರಣೆ ಮಾತ್ರ. ಇನ್ನೂ ಅನೇಕ ಪಂಚಾಯತ್ ಪ್ರದೇಶಗಳಲ್ಲಿ ಇಂತಹ ಅಕ್ರಮ ನಿರ್ಮಾಣಗಳು ಮತ್ತು ಅತಿಕ್ರಮಣಗಳಿರುವ ಸಾಧ್ಯತೆ ಇದೆ. ಇಂತಹ ಅನ್ಯಾಯಗಳ ವಿರುದ್ಧ ಹೋರಾಡಲು ಮತ್ತು ಸತ್ಯವನ್ನು ಬಹಿರಂಗಪಡಿಸಲು ಹೆಚ್ಚಿನ RTI ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಗತ್ಯವಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲರೂ ಜಾಗೃತರಾಗಬೇಕು ಆಗ ಮಾತ್ರ ನಿಜವಾದ ನ್ಯಾಯ ಮತ್ತು ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ.




