September 4, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಜ್ಞಾನ ಕಲಿಕೆಗೆ ಹೊಸ ವೇದಿಕೆ – ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿ ‘ಪ್ರೇರಣಾ–ವಿಜ್ಞಾನೋತ್ಸವ 2026’ ಪೋಸ್ಟರ್ ಬಿಡುಗಡೆ

ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಸಂಶೋಧನೆ ಹಾಗೂ ನವೀನ ಚಿಂತನೆಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ದೇರಳಕಟ್ಟೆಯ ಫಾದರ್ ಮುಲ್ಲರ್ ಕ್ಯಾಂಪಸ್‌ನಲ್ಲಿ ‘ಪ್ರೇರಣಾ–ವಿಜ್ಞಾನೋತ್ಸವ 2026’ ಆಯೋಜಿಸಲಾಗಿದ್ದು, ಇದರ ಅಧಿಕೃತ ಪೋಸ್ಟರ್ ಅನ್ನು ಗಣ್ಯರು ಹಾಗೂ ಸಂಘಟನಾ ತಂಡದ ಸಮ್ಮುಖದಲ್ಲಿ ಇಂದು ಆಗಸ್ಟ್ 22ರಂದು ಶನಿವಾರ ಬಿಡುಗಡೆ ಮಾಡಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು, ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ಡಿವಿಜನ್‌ಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 27 ಮತ್ತು 28ರಂದು ವಿಜ್ಞಾನೋತ್ಸವ ನಡೆಯಲಿದೆ. ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ.

‘ಪ್ರೇರಣಾ–ವಿಜ್ಞಾನೋತ್ಸವ 2026’ ತರಗತಿಯ ಕಲಿಕೆಯನ್ನು ಮೀರಿ ವಿದ್ಯಾರ್ಥಿಗಳಿಗೆ ವಿಜ್ಞಾನ ಲೋಕವನ್ನು ನೇರವಾಗಿ ಅನುಭವಿಸುವ ಅವಕಾಶ ಕಲ್ಪಿಸಲಿದೆ. ವಿಜ್ಞಾನ ಪ್ರದರ್ಶನ, ಸಂವಾದಾತ್ಮಕ ಚಟುವಟಿಕೆಗಳು, ಪ್ರಾಯೋಗಿಕ ಕಲಿಕಾ ಅನುಭವಗಳು ಹಾಗೂ 13ಕ್ಕೂ ಹೆಚ್ಚು ವೈವಿಧ್ಯಮಯ ಸ್ಪರ್ಧೆಗಳು ವಿಜ್ಞಾನೋತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ವಿಜೇತರಿಗೆ ₹1.5 ಲಕ್ಷಕ್ಕೂ ಅಧಿಕ ಮೌಲ್ಯದ ಬಹುಮಾನಗಳು ಲಭಿಸಲಿವೆ.

ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಶೆರ್ಲಾಕ್ ಚಾಲೆಂಜ್–ಕಿರು ನಾಟಕ, ವಿಜ್ಞಾನ ರಸಪ್ರಶ್ನೆ, ಒನ್-ಮಿನಿಟ್ ಸೈಂಟಿಸ್ಟ್, ವಿಜ್ಞಾನ ಚರ್ಚೆ, ಜಂಕ್ ಟು ಜೀನಿಯಸ್, AI ಫ್ಲೈಯರ್ ತಯಾರಿಕೆ, ಶಾರ್ಕ್ ಟ್ಯಾಂಕ್, ಸೈನ್ಸ್ ಎಸ್ಕೇಪ್ ರೂಮ್, ವಿಷಯಾಧಾರಿತ ಅಡುಗೆ ಸ್ಪರ್ಧೆ, ಬಯೋ-ಆರ್ಟ್ ಹಾಗೂ ಪೆನ್ಸಿಲ್ ಸ್ಕೆಚ್ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಲಿವೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂ ಮುಕ್ತವಾಗಿರುವ ಪೋಸ್ಟರ್ ಸ್ಪರ್ಧೆ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ನವೀನ ಆಲೋಚನೆಗಳನ್ನು ಪ್ರದರ್ಶಿಸಲು ವಿಶೇಷ ಅವಕಾಶ ನೀಡಲಿದೆ. ವಿಜ್ಞಾನೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ವೈದ್ಯಕೀಯ ವಿಜ್ಞಾನ ಆಧಾರಿತ ವಿಜ್ಞಾನ ಪ್ರದರ್ಶನ. 25ಕ್ಕೂ ಹೆಚ್ಚು ಸಂವಾದಾತ್ಮಕ ಮಳಿಗೆಗಳು ಇಲ್ಲಿ ಇರಲಿದ್ದು, ವಿವಿಧ ಆಕರ್ಷಕ ಪ್ರದರ್ಶನಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ವೈದ್ಯಕೀಯ ಮತ್ತು ಆರೋಗ್ಯ ವಿಜ್ಞಾನದ ಹಲವು ಆಯಾಮಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ಅರಿತುಕೊಳ್ಳಬಹುದಾಗಿದೆ.

‘ಮೆಡ್‌ಸ್ಟಾರ್ಟ್–26’ ಮೂಲಕ ವೈದ್ಯಕೀಯ ಕ್ಷೇತ್ರದ ಪ್ರಾಯೋಗಿಕ ಪರಿಚಯ:

‘ಪ್ರೇರಣಾ–ವಿಜ್ಞಾನೋತ್ಸವ 2026’ರ ಅಂಗವಾಗಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ರೂಪಿಸಲಾಗಿರುವ ‘ಮೆಡ್‌ಸ್ಟಾರ್ಟ್–26’ ಪ್ರಾಯೋಗಿಕ ವೈದ್ಯಕೀಯ ತರಬೇತಿ ಕಾರ್ಯಕ್ರಮವೂ ಅಕ್ಟೋಬರ್ 27 ಮತ್ತು 28ರಂದು ನಡೆಯಲಿದೆ.

ಯುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದ ಕುರಿತು ಪ್ರಾಯೋಗಿಕ ಹಾಗೂ ಅನುಭವಾಧಾರಿತ ಕಲಿಕೆಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರಲ್ಲಿ ಮೂಲಭೂತ ಜೀವ ರಕ್ಷಕ ತರಬೇತಿ (BLS), ಪ್ರಥಮ ಚಿಕಿತ್ಸೆ ತರಬೇತಿ, ವೈಜ್ಞಾನಿಕ ಪರಿಶೋಧನೆ ಹಾಗೂ ಸಂವಾದಾತ್ಮಕ ಕ್ಲಿನಿಕಲ್ ಮತ್ತು ವೈದ್ಯಕೀಯ ಕಲಿಕೆ ಎಂಬ ನಾಲ್ಕು ಪ್ರಮುಖ ತರಬೇತಿ ವಿಭಾಗಗಳಿರಲಿವೆ.

ಪ್ರತಿದಿನ ಎರಡು ಕಲಿಕಾ ಅವಧಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕುತೂಹಲ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸುವುದರ ಜೊತೆಗೆ, ವೈದ್ಯಕೀಯ ವೃತ್ತಿಯ ಕುರಿತು ಅರ್ಥಪೂರ್ಣ ಪರಿಚಯ ನೀಡುವುದು ಮೆಡ್‌ಸ್ಟಾರ್ಟ್–26ರ ಉದ್ದೇಶವಾಗಿದೆ.

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ವತಿಯಿಂದ ಆಯೋಜಿಸಲಾಗುತ್ತಿರುವ ಈ ವಿಜ್ಞಾನೋತ್ಸವವು ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ನೋಡಲು ಮಾತ್ರವಲ್ಲ, ಅದನ್ನು ಅನುಭವಿಸಲು, ಪ್ರಯೋಗಿಸಲು ಮತ್ತು ಹೊಸ ಆಲೋಚನೆಗಳನ್ನು ರೂಪಿಸಲು ಪ್ರೇರಣಾದಾಯಕ ವೇದಿಕೆಯಾಗಲಿದೆ.

ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ FMCI ನಿರ್ದೇಶಕರಾದ ವಂದನೀಯ ಫಾದರ್ ಫಾವುಸ್ತಿನ್ ಲೂಕಾಸ್ ಲೋಬೊ, FMHMC & FMCOPS ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ಟಾ, FMHPD ಆಡಳಿತಾಧಿಕಾರಿಗಳಾದ ವಂದನೀಯ ಫಾದರ್ ನೆಲ್ಸನ್ ಧೀರಜ್ ಪಾಯ್ಸ್, FMHMC ಪ್ರಾಂಶುಪಾಲ ಡಾ. ಪ್ರಭು ಕಿರಣ್, FMCOPS ಪ್ರಾಂಶುಪಾಲ ಡಾ. ಸತೀಶ್, FMHMC ಉಪಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿಸೋಜ, FMHMC ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನವಾಡ, ಉಪ ವೈದ್ಯಕೀಯ ಅಧೀಕ್ಷಕಿ ಡಾ. ದೀಪಾ ಪಾಯ್ಸ್, ಸಂಚಾಲಕಿ ಡಾ. ಇಂದು ಓ.ಎಸ್., ಸಹ-ಸಂಚಾಲಕಿ ನಿಶ್ಮಿತಾ, ಮಾಧ್ಯಮ ಸಂಯೋಜಕ ಡಾ. ಧೀರಜ್ ಫೆರ್ನಾಂಡಿಸ್, ಸಹ-ಸಂಯೋಜಕ ಶ್ರೇಯಾಂಕ್ ಕೋಟ್ಯಾನ್ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ: ಡಾ. ಇಂದು ಓ.ಎಸ್. – 9526229970 ಮತ್ತು ನಿಶ್ಮಿತಾ – 9964139444 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

You may also like

News

ಬೆಟ್ಟಂಪಾಡಿ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣ ಭೇದಿಸಿದ ಪುತ್ತೂರು ಪೊಲೀಸರು – ಅಂತರ್‌ರಾಜ್ಯ ಕಳ್ಳನ ಬಂಧನ

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣವನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಭೇದಿಸಿ, ಕೇರಳ ಮೂಲದ ಅಂತರ್‌ರಾಜ್ಯ ಕಳ್ಳತನ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಬೆಟ್ಟಂಪಾಡಿ
News

₹29 Lakh Donation to Father Muller for Paediatric Cancer Care Through ‘Symphony of Hope’

Music, compassion and community come together to support children battling cancer In a remarkable initiative that brought together music, compassion

You cannot copy content of this page