October 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಿಕರ್ನಕಟ್ಟೆ ರಸ್ತೆ ಅವ್ಯವಸ್ಥೆ : ಹೆದ್ದಾರಿ–ಪಾಲಿಕೆ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಮಂಗಳೂರು ನಗರದ ಪ್ರಮುಖ ಸಂಪರ್ಕ ಪ್ರದೇಶಗಳಲ್ಲಿ ಒಂದಾದ ನಂತೂರು–ಬಿಕರ್ನಕಟ್ಟೆ ರಸ್ತೆ ಹಲವು ಮೂಲಸೌಕರ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂತೂರಿನಿಂದ ಬಿಕರ್ನಕಟ್ಟೆ ಮೂಲಕ ಬಂಟ್ವಾಳ, ಧರ್ಮಸ್ಥಳ, ಬೆಂಗಳೂರು, ಮೈಸೂರು, ಮೂಡುಬಿದಿರೆ, ಕಾರ್ಕಳ ಸೇರಿದಂತೆ ಹಲವು ಪ್ರಮುಖ ಸ್ಥಳಗಳಿಗೆ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖ ವಸತಿ ಪ್ರದೇಶಗಳು, ಅಪಾರ್ಟ್‌ಮೆಂಟ್‌ಗಳು, ಶಾಲಾ-ಕಾಲೇಜುಗಳು ಹಾಗೂ ಧಾರ್ಮಿಕ ಕೇಂದ್ರಗಳು ಇರುವ ಈ ಭಾಗದಲ್ಲಿ ರಸ್ತೆ ಬದಿ ನಿವಾಸಿಗಳು ಹಾಗೂ ಅಂಗಡಿ ಮಾಲೀಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ವಿಶೇಷವಾಗಿ ಜಯಶ್ರೀ ಗೇಟ್‌ನಿಂದ ಬಿಕರ್ನಕಟ್ಟೆವರೆಗೆ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಸ್ಥಳೀಯರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ರಸ್ತೆ ಜಲಾವೃತವಾಗುವುದರೊಂದಿಗೆ ಕೊಳಕು ನೀರಿನ ದುರ್ವಾಸನೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ದುರಸ್ತಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ ಎನ್ನಲಾಗಿದೆ.

ರಸ್ತೆ ಸುರಕ್ಷತೆಗೂ ನಿರ್ಲಕ್ಷ್ಯ?

ಈ ಭಾಗದಲ್ಲಿ ವಾಹನ ಸಂಚಾರ ಹೆಚ್ಚಿದ್ದು, ಜನಸಂದಣಿ ಇರುವ ಬಿಕರ್ನಕಟ್ಟೆ, ಚರ್ಚ್, ಮಸೀದಿ ಹಾಗೂ ಜಯಶ್ರೀ ಗೇಟ್ ಸಮೀಪ ರಸ್ತೆ ದಾಟಲು ಸೂಕ್ತ ಜೀಬ್ರಾ ಕ್ರಾಸಿಂಗ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ವೇಗವಾಗಿ ಸಂಚರಿಸುವ ವಾಹನಗಳಿಂದಾಗಿ ಅಪಘಾತದ ಅಪಾಯವೂ ಹೆಚ್ಚಿದೆ ಎನ್ನಲಾಗಿದೆ.

ಬಿಕರ್ನಕಟ್ಟೆ ಫ್ಲೈಓವರ್ ಸೇರಿದಂತೆ ವಿವಿಧ ಮಾರ್ಗಗಳಿಗೆ ತೆರಳುವ ವಾಹನಗಳಿಗೆ ಸ್ಪಷ್ಟ ಮಾರ್ಗಸೂಚಿ ಫಲಕಗಳ ಕೊರತೆ ಕೂಡ ಸಮಸ್ಯೆಯಾಗಿದೆ. ರಾತ್ರಿ ವೇಳೆ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರಿಗೆ ದಾರಿ ಗುರುತಿಸಲು ತೊಂದರೆಯಾಗುತ್ತಿದೆ. ಜಯಶ್ರೀ ಗೇಟ್ ಸಮೀಪದ ರಸ್ತೆ ವಿಭಜಕದಲ್ಲಿಯೂ ಸಮರ್ಪಕ ದಾರಿದೀಪಗಳಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಫ್ಲೈಓವರ್ ಕಾಮಗಾರಿಗೆ ಮುನ್ನವೇ ದಾರಿದೀಪಗಳ ಕಂಬಗಳನ್ನು ಅಳವಡಿಸಲಾಗಿದ್ದರೂ, ಅವುಗಳಿಗೆ ದೀಪಗಳನ್ನು ಅಳವಡಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆ ವಿಭಜಕಗಳಲ್ಲಿ ಸ್ಪಷ್ಟ ಪ್ರತಿಫಲಕಗಳು ಹಾಗೂ ಸುರಕ್ಷತಾ ಗುರುತುಗಳನ್ನು ಅಳವಡಿಸಬೇಕೆಂಬ ಬೇಡಿಕೆಯೂ ಇದೆ.

ಬಿಕರ್ನಕಟ್ಟೆ ಬಾಲ ಯೇಸು ಪುಣ್ಯಕ್ಷೇತ್ರದ ಬಳಿ ಹಿಂದಿನ ಯೂ-ಟರ್ನ್‌ನ್ನು ಬಂದ್ ಮಾಡಲಾಗಿದ್ದರೂ, ಕೆಲ ವಾಹನ ಸವಾರರು ರಾತ್ರಿ ವೇಳೆ ಅಲ್ಲಿಯೇ ವಾಹನ ತಿರುಗಿಸುವುದರಿಂದ ಅಪಾಯದ ಸಾಧ್ಯತೆ ಇದೆ. ಈ ಸ್ಥಳದಲ್ಲಿ ಸೂಕ್ತ ಪ್ರತಿಫಲಕಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಲಿ:

ಈ ಸಮಸ್ಯೆಗಳ ಕುರಿತು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು, ಸಂಚಾರ ಪೊಲೀಸರು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ತಂದಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ನಂತೂರಿನಿಂದ ಬಿಕರ್ನಕಟ್ಟೆ ಫ್ಲೈಓವರ್‌ವರೆಗೆ ಚರಂಡಿ ವ್ಯವಸ್ಥೆ, ದಾರಿದೀಪ, ಮಾರ್ಗಸೂಚಿ ಫಲಕ, ರಸ್ತೆ ವಿಭಜಕಗಳ ಪ್ರತಿಫಲಕಗಳು ಹಾಗೂ ಜೀಬ್ರಾ ಕ್ರಾಸಿಂಗ್‌ಗಳನ್ನು ಸಮರ್ಪಕವಾಗಿ ಕಲ್ಪಿಸಿ, ರಸ್ತೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಮಂಗಳೂರಿನ ಪ್ರಮುಖ ಪ್ರವೇಶ ಹಾಗೂ ಸಂಪರ್ಕ ಪ್ರದೇಶವಾಗಿರುವ ಬಿಕರ್ಣಕಟ್ಟೆಯ ಮೂಲಸೌಕರ್ಯ ಸಮಸ್ಯೆಗಳಿಗೆ ಇನ್ನಾದರೂ ಆದ್ಯತೆ ನೀಡಿ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

You may also like

News

ಕಳ್ಳತನ ಪ್ರಕರಣ – ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಟ್ಲ ಪೊಲೀಸರಿಂದ ಬಂಧನ

ಕಳ್ಳತನ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಒಂದೂವರೆ ವರ್ಷದಿಂದ ತಲೆಮರೆಸಿಕೊಂಡಿದ್ದ ಕೇರಳದ ಮಲಪ್ಪುರಂ ನಿವಾಸಿ ರಂಶೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
News

Father Muller Medical College Hospital Showcases Green Healthcare Initiatives at NABH National Patient Safety Conference in Delhi

Selected for a national-level presentation, FMMCH highlights sustainable environmental practices, responsible resource management and resilience in healthcare delivery Father Muller

You cannot copy content of this page